ನ್ಯೂಸ್

ಹಾವನ್ನು ಕೊಂದು ತಿಂದ ವಿಡಿಯೋ ವೈರಲ್​: ಬಂಧಿತ ಆರೋಪಿ ಕೊಟ್ಟ ಹೇಳಿಕೆಗೆ ಪೊಲೀಸರೇ ಶಾಕ್!​

ಚೆನ್ನೈ: ಹಾವನ್ನು ಕೊಂದು ತಿನ್ನುವ ವಿಡಿಯೋ ರೆಕಾರ್ಡ್​ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ತಮಿಳುನಾಡಿನ ತಿರುನೆಲ್ವೇಲಿಯ ಪೆರುಮಾಲಪಟ್ಟಿ ಗ್ರಾಮದ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವಡಿವೇಲು ಎಂಬಾತ ಹಾವನ್ನು ತಿನ್ನುತ್ತಿರುವ ದೃಶ್ಯವಿದ್ದು, ಮಹಾಮಾರಿ ಕರೊನಾ ಸೋಂಕಿಗೆ ಇದು ಒಳ್ಳೆಯ ಮರುಮದ್ದು ಎಂದು ವಾದಿಸಿದ್ದಾನೆ.

ವಿಡಿಯೋ ನೋಡಿ ಶಾಕ್​ ಆದ ಪರಿಸರವಾದಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ವಡಿವೇಲುನನ್ನು ಬಂಧಿಸಿದ್ದಾರೆ. ಅಲ್ಲದೆ, 7,500 ರೂಪಾಯಿ ದಂಡವನ್ನು ಸಹ ವಿಧಿಸಲಾಗಿದೆ.

ಮೈದಾನವೊಂದರಲ್ಲಿ ಹಾವನ್ನು ಹಿಡಿದಿದ್ದಾಗಿ ಮತ್ತು ಅದನ್ನು ಕೊಂದು ತಿಂದಿದ್ದಾಗಿ ವಿಚಾರಣೆ ವೇಳೆ ವಡಿವೇಲು ತಪ್ಪೊಪ್ಪಿಕೊಂಡಿದ್ದಾನೆ. ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಹಾವನ್ನು ಹಿಡಿದು ತಿಂದಿದ್ದಾಗಿ ಹೇಳಿಕೊಂಡಿದ್ದಾನೆ.

ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಅಘಾತಕಾರಿ ಎಂದು ಅರಣ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರಾಣಿಗಳನ್ನು ಕೊಂದು ತಿನ್ನು ಅತ್ಯಂತ ಅಪಾಯಕಾರಿ. ಆ ಪ್ರಾಣಿಗಳಲ್ಲಿನ ರೋಗಕಾರಕಗಳು ಮತ್ತೊಬ್ಬರ ದೇಹಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)