ನ್ಯೂಸ್

ಕೇಶ ವಿನ್ಯಾಸ ಮತ್ತು ಗಡ್ಡ ಶೇವಿಂಗ್​ಗೆ ಬ್ರೇಕ್​ ಹಾಕಿದ ತಾಲಿಬಾನಿಗಳು: ಸಲೂನ್​ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ

ಕಾಬುಲ್​: ಅಫ್ಘಾನಿಸ್ತಾನದ ಹೆಲ್ಮ್ಯಾಂಡ್​ ಪ್ರಾಂತ್ಯದಲ್ಲಿ ತಾಲಿಬಾನಿಗಳು ಕ್ಷೌರಿಕರಿಗೆ ನಿಷೇಧ ಹೇರಿದ್ದು, ಇನ್ನು ಮುಂದೆ ಗಡ್ಡವನ್ನು ಶೇವಿಂಗ್​ ಅಥವಾ ಟ್ರಿಮ್​ ಮಾಡುವಂತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಯಾವುದೇ ಕ್ಷೌರದಂಗಡಿಗಳಲ್ಲಿ ವಿಭಿನ್ನ ಕೇಶವಿನ್ಯಾಸ (ಸ್ಟೈಲಿಶ್​ ಹೇರ್​ಸ್ಟೈಲ್ಸ್​) ಮತ್ತು ಗಡ್ಡ ಶೇವಿಂಗ್​ ಮಾಡುವಂತಿಲ್ಲ ಮತ್ತು ಹೇರ್​ ಸಲೂನ್​ಗಳ​ಲ್ಲಿ ಮ್ಯೂಸಿಕ್ ಹಾಕುವಂತಿಲ್ಲ ಎಂದು ತಾಲಿಬಾನಿಗಳು ಆದೇಶ ಹೊರಡಿಸಿದ್ದಾರೆ.

ಇನ್ನು ತಾಲಿಬಾನ್ ತನ್ನ ದಮನಕಾರಿ ಕಾನೂನುಗಳು ಮತ್ತು ನೀತಿಗಳನ್ನು ಪುನಃ ಆಫ್ಘಾನ್​ ಜನರ ಮೇಲೆ ಹೇರುತ್ತಿದೆ. ಭಾರಿ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹಿಂಸೆಗಳು ತಾಂಡವವಾಡುತ್ತಿವೆ. ಅಪಹರಣದಲ್ಲಿ ಆರೋಪ ಹೊತ್ತು ನಾಲ್ವರನ್ನು ಕೊಂದು ಸಾರ್ವಜನಿಕ ಪ್ರದೇಶದಲ್ಲೇ ನೇತು ಹಾಕಿದ ಘಟನೆ ಕೆಲವೇ ದಿನಗಳ ಹಿಂದಷ್ಟೇ ಹೆರಾತ್​ ನಗರದಲ್ಲಿ ನಡೆದಿದೆ.

ಯುಎಸ್ ಮತ್ತು ನ್ಯಾಟೋ ಪಡೆಗಳು ಕಾಬುಲ್​ನಿಂದ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್​ ತನ್ನ ಕರಾಳ ಮುಖವನ್ನು ಒಂದೊಂದಾಗಿ ಕಳಚುತ್ತಾ ಬರುತ್ತಿದೆ. ಧರ್ಮ ಪ್ರತಿಪಾದನೆಯ ಹಾದಿ ಹಿಡಿದಿರುವ ತಾಲಿಬಾನ್​ ಹಿಂಸೆ ಪ್ರವೃತ್ತಿಯೊಂದಿಗೆ ಆಫ್ಘಾನ್​ ನೆಲವನ್ನು ನರಕವಾಗಿ ಬದಲಾಯಿಸಿದೆ. (ಏಜೆನ್ಸೀಸ್​)