ಹೈದರಾಬಾದ್: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗಳನ್ನು ಆತಂಕದಿಂದಲೇ ಆಸ್ಪತ್ರೆಗೆ ಕರೆದೊಯ್ದ ತಾಯಿಗೆ ಆಘಾತವೇ ಕಾದಿತ್ತು. ಮಗಳನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಏನಾಗಿದೆ ಎಂದು ಹೇಳಿದಾಗ ತಾಯಿಯ ಹೃದಯವೇ ಬಿರಿಯಿತು. ಏಕೆಂದರೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಆಕೆಯ ಮಗಳ ಬಾಳಲ್ಲೇ ನಡೆದುಹೋಗಿದೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ ಜಿಲ್ಲೆಯ ಮೊಮಿನ್ಪೇಟ್ ಮಂಡಲದ ವ್ಯಕ್ತಿ ಮೂವರು ಮಕ್ಕಳನ್ನು ಹೊಂದಿದ್ದಾನೆ. ಮೊಮ್ಮಿನ್ಪೇಟ್ನಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದ ವ್ಯಕ್ತಿ, ತನ್ನ ಪತ್ನಿಯೊಂದಿಗೆ ಪಟಂಚೆರುವಿನ ಫಾರ್ಮ್ ಹೌಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಸಮಯದಲ್ಲಿ ತನ್ನ ಮಕ್ಕಳನ್ನು ತಾವಿದ್ದಲ್ಲಿಗೆ ಕರೆಸಿಕೊಂಡಿದ್ದ. ಆದರೆ, ಆತನ ಕಾಮದೃಷ್ಟಿ 8ನೇ ತರಗತಿ ಓದುತ್ತಿದ್ದ ಹಿರಿಯ ಮಗಳ ಮೇಲೆ ಬಿದ್ದಿತ್ತು.
ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಮಗಳನ್ನು ಬೆದರಿಸಿ ಕಿರುಕುಳ ನೀಡಲು ಆರಂಭಿಸಿದ್ದ. ಅನೇಕ ಬಾರಿ ಮಗಳನ್ನೇ ತನ್ನ ಕಾಮತೃಷೆಗೆ ಪಾಪಿ ತಂದೆ ಬಳಸಿಕೊಂಡಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆದರೆ, ಮಗಳ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದರಿಂದ ಆಕೆಯನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಳು. ಮಗಳನ್ನು ಪರೀಕ್ಷಿಸಿದ ವೈದ್ಯರು ನಿಮ್ಮ ಮಗಳೀಗ ಮೂರು ತಿಂಗಳ ಗರ್ಭಿಣಿ ಎಂದು ಹೇಳಿದಾಗ ತಾಯಿಯ ಹೃದಯ ಒಮ್ಮೆಲೆ ಸ್ಫೋಟಿಸಿದಂತಾಯಿತು.
ಬಳಿಕ ಮಗಳ ಬಳಿ ಏನಾಯಿತು ಎಂದು ಕೇಳಿದಾಗ ಸಂತ್ರಸ್ತೆ ತಂದೆಯ ಕರಾಳ ಮುಖವನ್ನು ಹೊರಗಾಕಿದಳು. ತಂದೆಯೇ ಮಗಳನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ಕೇಳಿದ ತಾಯಿ ಗಂಡನನ್ನು ಪ್ರಶ್ನಿಸಿದಾಗ, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ, ಗರ್ಭಪಾತ ಮಾಡಿಸುವಂತೆ ಪತ್ನಿಯ ಕೈಯಲ್ಲಿ 20 ಸಾವಿರ ರೂ. ಹಣವನ್ನು ನೀಡಿದ್ದ. ಅದರಂತೆ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ತಾಯಿ ಗರ್ಭಪಾತ ಮಾಡುವಂತೆ ವೈದ್ಯರ ಬಳಿ ಕೇಳಿಕೊಂಡಿದ್ದಳು. ಅಲ್ಲದೆ, ಮಗಳ ಈ ಸ್ಥಿತಿಗೆ ಕಾರಣವಾದ ಗಂಡನ ಮೇಲೆಯೂ ಆಕೆ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪಟಂಚೆರುವಿನ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)