ಗರ್ಭಿಣಿ ಪತ್ನಿಯ ಹತ್ಯೆಗೆ ಯತ್ನಿಸಿ ಎದುರು ಮನೆ ದಂಪತಿಯನ್ನೂ ಕೊಂದ! ಇವನ ಮಾತು ಕೇಳಿದ್ರೆ ಅಹಸ್ಯ ಅನ್ನಿಸುತ್ತೆ

New Project (30)
Published on

ನಂಜನಗೂಡು: ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ, ನಿನ್ನೆ ರಾತ್ರಿ(ಬುಧವಾರ) 2ನೇ ಪತ್ನಿಯ ಹತ್ಯೆಗೂ ಯತ್ನಿಸಿ ಎದುರು ಮನೆಯ ದಂಪತಿಯನ್ನು ಕೊಂದು, 4 ಜನರ ಮೇಲೆ ಮಚ್ಚು ಬೀಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನ ಬಂಧಿಸಿ ಜೀಪ್​ನಲ್ಲಿ ಕೂರಿಸಿದರೂ ಜೀಪ್‌ನಿಂದ ಜಿಗಿದು ಮತ್ತಿಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಪೊಲೀಸರ ಮೇಲೂ ಮಚ್ಚು ಬೀಸಿದ್ದಾನೆ. ಇಂತಹ ಭಯಾನಕ ಘಟನೆಗೆ ಊರಿಗೆ ಊರೇ ಬೆಚ್ಚಿಬಿದ್ದಿದೆ.

ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಕೊಲೆ ಮತ್ತು ಹಲ್ಲೆಯ ದೃಶ್ಯ ಕಂಡ ಗ್ರಾಮಸ್ಥರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಗ್ರಾಮದ ಈರಣ್ಣ(48) ಎಂಬಾತ ಕೊಲೆ ಆರೋಪಿ. ತನ್ನ ಗರ್ಭಿಣಿ ಪತ್ನಿಯ ಹತ್ಯೆಗೂ ಯತ್ನಿಸಿ ಅದನ್ನು ತಡೆಯಲು ಬಂದ ಅತ್ತೆ ಮೇಲೂ ಮಚ್ಚು ಬೀಸಿ, ಎದುರು ಮನೆ ಯುವಕನ ತಂದೆ-ತಾಯಿಯನ್ನೂ ಕೊಂದು ಸಿಕ್ಕಸಿಕ್ಕವರ ಮೇಲೆ ಮಚ್ಚುಬೀಸಿದ್ದಕ್ಕೆ ಆತ ಕೊಡುವ ಸಮರ್ಥನೆ ಕೇಳಿದ್ರೆ ಅಹಸ್ಯ ಅನ್ನಿಸುತ್ತೆ.

ಈರಣ್ಣ ತನ್ನ ಮೊದಲ ಪತ್ನಿಯನ್ನು ಹತ್ಯೆ ಮಾಡಿ ಸೆರೆವಾಸ ಅನುಭವಿಸಿದ್ದ. ಬಿಡುಗಡೆಯ ನಂತರ ಮಹದೇವಮ್ಮ(28) ಎಂಬಾಕೆಯನ್ನ 2ನೇ ಮದುವೆಯಾಗಿದ್ದ. ಈಕೆ ಸದ್ಯ ತುಂಬು ಗರ್ಭಿಣಿ. ಬುಧವಾರ ರಾತ್ರಿ ಮನೆಗೆ ಬಂದ ಈರಣ್ಣ, ಎದುರು ಮನೆ ಯುವಕ ರವಿಯಿಂದ ನೀನು ಗರ್ಭಿಣಿ ಆಗಿದ್ದೀಯಾ. ನಿಮ್ಮಿಬ್ಬರ ನಡುವೆ ಅಕ್ರಮ ಸಂಬಂಧ ಇದೆ. ನಿನ್ನ ಹೊಟ್ಟೆಯಲ್ಲಿ ಇರುವ ಮಗುವಿನ ತಂದೆ ನಾನಲ್ಲ, ಎದುರು ಮನೆಯ ರವಿ... ಎಂದು ದು ಜಗಳ ತೆಗೆದಿದ್ದಾನೆ. ಊಟ ಮಾಡುತ್ತಿದ್ದ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಇದನ್ನು ತಡೆಯಲು ಬಂದ ಅತ್ತೆ ಗೌರಮ್ಮನ ಮೇಲೂ ಹಲ್ಲೆ ಮಾಡಿದ್ದಾನೆ. ನಂತರ ಮಚ್ಚು ಹಿಡಿದುಕೊಂಡೇ ಎದುರು ಮನೆಗೆ ಹೋಗಿ ರವಿಗಾಗಿ ಹುಡುಕಾಟ ನಡೆಸಿದ್ದಾನೆ. ಆ ವೇಳೆ ರವಿ ಮನೆಯಲ್ಲಿ ಇರಲಿಲ್ಲ. ರವಿಯ ತಂದೆ ಮಾದಯ್ಯ ಮತ್ತು ತಾಯಿ ನಿಂಗಮ್ಮ ಬಳಿ ಜಗಳಕ್ಕೆ ಇಳಿದ ಅವರನ್ನು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಮಚ್ಚಿನೇಟಿಗೆ ನಿಂಗಮ್ಮ(50) ಸ್ಥಳದಲ್ಲೇ ಸಾವಿಗೀಡಾದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಾದಯ್ಯ(70) ಉಸಿರುಚೆಲ್ಲಿದ್ದಾರೆ. ನೆರೆ ಹೊರೆಯವರಾದ ಸುರೇಶ್​, ಮಹದೇವಮ್ಮ ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಡಿವೈಎಸ್​ಪಿ ಗೋವಿಂದರಾಜು, ಗ್ರಾಮಾಂತರ ಇನ್​ಸ್ಪೆಕ್ಟರ್​ ಶಿವನಂಜಶೆಟ್ಟಿ, ವೃತ್ತ ನಿರೀಕ್ಷಕ ಲಕ್ಷ್ಮೀಮಕಾಂತ್​ ತಳವಾರ್​ ಹಾಗೂ ಸಿಬ್ಬಂದಿ ಈರಣ್ಣನನ್ನು ಬಂಧಿಸಲು ಹರಸಾಹಸವನ್ನೇ ಪಡಬೇಕಾಯಿತು. ಪೊಲೀಸ್​ ಜೀಪ್‌ನಿಂದ ಜಿಗಿದು ರವಿ ಸಂಬಂಧಿ ಸುರೇಶ ಹಾಗೂ ಮಹದೇವಸ್ವಾಮಿ ಎಂಬುವರ ಮೇಲೂ ಈರಣ್ಣ ಹಲ್ಲೆ ಮಾಡಿದ್ದಾನೆ. ಈ ವೇಳೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಸಬ್‌ ಇನ್ಸ್‌ಪೆಕ್ಟರ್ ರಾಮಸ್ವಾಮಿಗೂ ಗಾಯವಾಗಿದೆ.

ಇನ್ನು ಈ ಘಟನೆಯಲ್ಲಿ ಗಾಯಗೊಂಡ ಈರಣ್ಣನ ಅತ್ತೆ ಗೌರಮ್ಮ, ಪತ್ನಿ ಮಹದೇವಮ್ಮಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಮೂವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net