ನ್ಯೂಸ್

ಕದ್ದ ಲಾಟರಿಗೆ ಒಲಿದ ನಗದು ಬಹುಮಾನ ಪಡೆಯಲು ಹೋದ ಖದೀಮನಿಗೆ ಕಾದಿತ್ತು ಬಿಗ್​ ಶಾಕ್​!

ಕೊತ್ತಮಂಗಲಂ: ಕದ್ದ ಲಾಟರಿ ಟಿಕೆಟ್​ಗೆ ಬಂದು ನಗದು ಬಹುಮಾನವನ್ನು ಪಡೆಯಲು ಹೋದ ಖದೀಮ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿರುವ ಘಟನೆ ಕೇರಳದ ಕೊತ್ತಮಂಗಲಂನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಉರುಂಬಿಲ್​ ಬಾಬು ಎಂದು ಗುರುತಿಸಲಾಗಿದೆ. ಈತ ಕೊತ್ತಮಂಗಲಂನ ಜೆಜೆ ಲಾಟರೀಸ್ ಹೆಸರಿನ​ ಅಂಗಡಿಯಿಂದ ನವೆಂಬರ್​ 12ರಂದು 80 ಸಾವಿರ ಮೌಲ್ಯದ 2520 ಲಾಟರಿಯನ್ನು ಕದ್ದಿದ್ದ. ಲಾಟರಿ ಏಜೆನ್ಸಿಗಳ ಸಹಾಯದಿಂದ ಕದ್ದ ಲಾಟರಿ ಟಿಕೆಟ್‌ಗಳ ಸಂಖ್ಯೆಯನ್ನು ಎಲ್ಲೆಡೆ ನೀಡಲಾಗಿತ್ತು.

ಕದ್ದ ಒಂದು ಲಾಟರಿಗೆ 5 ಸಾವಿರ ರೂ. ನಗದು ಬಹುಮಾನ ಬಂದಿತ್ತು. ಇದನ್ನು ತಿಳಿದ ಬಾಬು ಹಣ ಪಡೆದುಕೊಳ್ಳಲೆಂದು ಪಲಾದಲ್ಲಿರುವ ಲಾಟರಿ ಏಜೆನ್ಸಿಗೆ ಹೋಗಿದ್ದ. ಬಾಬು ಲಾಟರಿ ನೀಡಿದಾಗ ಅನುಮಾನಗೊಂಡ ಶಾಪ್​ ಮಾಲೀಕ ನಂಬರ್​ ಅನ್ನು ಪರಿಶೀಲಿಸಿದ್ದಾರೆ. ಇದನ್ನು ನೋಡಿ ಬಾಬು ಮಾಲೀಕನಿಗೆ ತನ್ನ ಕೃತ್ಯ ಗೊತ್ತಾಗಿದೆ ಎಂದು ತಿಳಿದು ಲಾಟರಿ ಟಿಕೆಟ್​ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಇದಾದ ಬಳಿಕ ಶಾಪ್​ ಮಾಲೀಕರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹುಡುಕಾಡಿದಾಗ ಆರೋಪಿ ಬಾಬು ಸಿಕ್ಕಿಬಿದ್ದಿದ್ದಾನೆ. ಆತನ ಮೇಲೆ ಅನೇಕ ಪ್ರಕರಣಗಳು ಕೂಡ ದಾಖಲಾಗಿವೆ. ಸದ್ಯ ಕಂಜಿರಪಲ್ಲಿ ಪೊಲೀಸರು ಬಾಬುನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)