ನ್ಯೂಸ್

ವೈದ್ಯನ ಮಾತಿಗೆ ಕೆರಳಿ ಕಪಾಳಕ್ಕೆ ಬಾರಿಸಿದ ನರ್ಸ್! ವೈರಲ್​ ಆಯ್ತು ವಿಡಿಯೋ

ರಾಂಪುರ: ಮರಣ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಉಂಟಾದ ವಾಗ್ವಾದ ತಾರಕಕ್ಕೇರಿ ನರ್ಸ್​ ಒಬ್ಬಳು ಸಾರ್ವಜನಿಕರ ಎದುರಲ್ಲೇ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವರದಿಯ ಪ್ರಕಾರ ರೋಗಿಗಳಿಂದ ತುಂಬಿದ್ದ ವೈದ್ಯರ ಕೊಠಡಿಗೆ ಬಂದ ನರ್ಸ್​, ಸಾವಿಗೀಡಾದ ರೋಗಿಯೊಬ್ಬರ ಮರಣ ಪ್ರಮಾಣ ಪತ್ರ ನೀಡುವಂತೆ ಕೇಳುತ್ತಾಳೆ. ಇದರ ಬೆನ್ನಲ್ಲೇ ಇಬ್ಬರ ನಡುವೆ ವಾಗ್ವಾದ ಶುರುವಾಗುತ್ತದೆ. ತಕ್ಷಣ ನರ್ಸ್​ ವೈದ್ಯನ ಕಪಾಳಕ್ಕೆ ಬಾರಿಸುತ್ತಾಳೆ. ಪ್ರತಿಯಾಗಿ ವೈದ್ಯನು ಸಹ ಆಕೆಗೆ ಬಾರಿಸುತ್ತಾರೆ.

ಈ ದೃಶ್ಯವನ್ನು ಆಸ್ಪತ್ರೆಯಲ್ಲಿದ್ದ ಸ್ಥಳೀಯರು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್​ ಆಗಿದೆ. ಈ ಘಟನೆ ಸೋಮವಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್​ ರವೀಂದ್ರ ಕುಮಾರ್​ ಆದೇಶಿಸಿದ್ದಾರೆ. ಸದ್ಯ ರೋಗಿಗಳ ಮುಂದೆಯೇ ನರ್ಸ್​ ಮತ್ತು ವೈದ್ಯ ಕಿತ್ತಾಡಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)