ನ್ಯೂಸ್

ಮನಕಲಕುವ ಘಟನೆ: ಕುಟುಂಬದ ನಿರ್ವಹಣೆಗಾಗಿ 9 ವರ್ಷದ ಹೆಣ್ಣು ಮಗುವನ್ನು ಮುದುಕನಿಗೆ ಮಾರಾಟ ಮಾಡಿದ ತಂದೆ

ಕಾಬುಲ್​: ತಾಲಿಬಾನ್​ ಆಡಳಿತವು ಅಫ್ಘಾನಿಸ್ತಾನವನ್ನು ಹಿಂದೆಂದು ಕಾಣದಂತಹ ಆರ್ಥಿಕ ಬಿಕ್ಕಟ್ಟಿಗೆ ನೂಕಿದೆ. ದೇಶದ ಅನೇಕ ಭಾಗಗಳಲ್ಲಿ ಆಫ್ಘಾನ್​ ಜನರ ಪರಿಸ್ಥಿತಿ ಹೀನಾಯಮಾನವಾಗಿದೆ. ಹೆಣ್ಣು ಮಕ್ಕಳನ್ನು ಮಾರಾಟ ಮಾಡಿ ಬದುಕು ಸಾಗಿಸುವಂತಹ ದುಸ್ಥಿತಿಗೆ ಆಫ್ಘಾನ್​ ಬಂದು ನಿಂತಿದೆ.

ಇತ್ತೀಚಿನ ದಿನಗಳಲ್ಲಿ ಆಫ್ಘಾನ್​ನಲ್ಲಿ ಬಡತನ ಹಾಗೂ ಹಸಿವಿನಿಂದ ಜನರು ನರಳಾಡುತ್ತಿದ್ದಾರೆ. ಬದುಕು ನಡೆಸಲು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. 9 ವರ್ಷದ ಪರ್ವಾನಾ ಮಲಿಕ್​ ಎಂಬ ಹೆಣ್ಣು ಮಗುವನ್ನು ಆಕೆಯ ಕುಟುಂಬ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿರುವ ಮನಕುಲವ ಘಟನೆ ಬೆಳಕಿಗೆ ಬಂದಿದೆ. ಭಯದ ನಾಡಾಗಿ ಬದಲಾಗಿರುವ ಆಫ್ಘಾನ್​ನ ಬದ್ಘಿಸ್ ಪ್ರಾಂತ್ಯದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಶಿಬಿರದಲ್ಲಿ ವಾಸಿಸುತ್ತಿದೆ. ಪರ್ವಾನಾ ಅವರ ಎಂಟು ಸದಸ್ಯರ ಕುಟುಂಬವು ಕೂಡ ಶಿಬಿರದಲ್ಲಿದೆ.

ಪರ್ವಾನಾ ಅವರ ತಂದೆ ಅಬ್ದುಲ್ ಮಲಿಕ್ ಅವರು ಈಗಾಗಲೇ ತನ್ನ 12 ವರ್ಷದ ಮಗಳನ್ನು ಒಂದೆರಡು ತಿಂಗಳ ಹಿಂದೆ ಮಾರಾಟ ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಈಗ, ಕುಟುಂಬದ ಇತರೆ ಸದಸ್ಯರನ್ನು ಜೀವಂತವಾಗಿಡಲು ಅವರು ಇನ್ನೊಬ್ಬ ಮಗಳನ್ನು ಮಾರಾಟ ಮಾಡಿದ್ದಾರೆ. ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಸಹ ಬಡತನ ಮತ್ತು ಹಸಿವು ಅವರನ್ನು ಆ ನಿರ್ಧಾರಕ್ಕೆ ನೂಕಿದೆ.

ಪರ್ವಾನಾ, ತಾನು ಚೆನ್ನಾಗಿ ಓದಿ ಶಿಕ್ಷಕಿಯಾಗಲು ಬಯಸಿದ್ದಳಂತೆ. ಆದರೆ, ಆಕೆಯ ಕುಟುಂಬದ ಆರ್ಥಿಕ ಪರಿಸ್ಥಿತಿ ಆಕೆಯ ಕನಸಿಗೆ ತಣ್ಣೀರೆರಚಿದೆ. ಮದುಕ ಗಂಡನ ಕಟ್ಟಿಕೊಂಡು ಜೀವನದಲ್ಲಿ ಮತ್ತಷ್ಟು ಸಂಕಷ್ಟಗಳನ್ನು ಎದುರಿಸಬೇಕಲ್ಲ ಎಂಬುದು ಪರ್ವಾನಾಳ ಚಿಂತೆಯಾಗಿದೆ.

ಅಂದಹಾಗೆ ಪರ್ವಾನಳನ್ನು ಆಕೆಯ ತಂದೆ 2,200 ಡಾಲರ್​ ಅಂದರೆ 2,24,694 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಇದು ನಿಮ್ಮ ವಧು. ದಯವಿಟ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಿ, ದಯವಿಟ್ಟು ಅವಳನ್ನು ಹೊಡೆಯಬೇಡಿ ಎಂದು ಮಗಳನ್ನು ಖರೀದಿಸಿದ ಬಳಿಕ ಪರ್ವಾನಾಳ ತಂದೆ ಬೇಡಿಕೊಂಡಿದ್ದು, ಅದಕ್ಕೆ ಪ್ರತಿಯಾಗಿ, ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿರುವುದು ತಿಳಿದುಬಂದಿದೆ. ಇಡೀ ಆಪ್ಘಾನ್​ನಲ್ಲಿ ಇದೇ ಪರಿಸ್ಥಿತಿ ಇದ್ದು, ಜನರು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. (ಏಜೆನ್ಸೀಸ್​)