ನ್ಯೂಸ್

ಬುಕ್​ ಮಾಡಿದ್ದು ವಾಚ್​ ಆದ್ರೆ ಬಂದಿದ್ದು ಕಾಂಡೋಮ್​! ಮರುಕ್ಷಣದಲ್ಲೇ ಡೆಲಿವರಿ ಬಾಯ್​ಗೆ ಶಾಕ್​ ಕೊಟ್ಟ ಗ್ರಾಹಕ

ಕೊಚ್ಚಿ: ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆನ್​ಲೈನ್​ಲ್ಲಿ ವಾಚ್ ಬುಕ್​ ಮಾಡಿದ ಗ್ರಾಹಕನಿಗೆ ಆರ್ಡರ್​ ಡೆಲಿವರಿ ಬಳಿಕ ಶಾಕ್​ ಕಾದಿತ್ತು.

ಈ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಥಟ್ಟಂಪಾಡಿ ನಿವಾಸಿ ಅನಿಲ್​ ಕುಮಾರ್​ ಎಂಬುವರು ಪ್ರಮುಖ ಇ-ಕಾಮರ್ಸ್​ ಕಂಪನಿಯಲ್ಲಿ 2,200 ರೂಪಾಯಿ ಬೆಲೆ ಬಾಳುವ ವಾಚ್ ಅನ್ನು​ ಬುಕ್​ ಮಾಡಿದ್ದರು.

ಶನಿವಾರ ಮಧ್ಯಾಹ್ನ ಇಬ್ಬರು ಡೆಲಿವರಿ ಏಜೆಂಟ್​ಗಳು ಅನಿಲ್​ ಕುಮಾರ್​ ಅವರ ಮನೆಗೆ ಬಂದು ವಾಚ್​ ಡೆಲಿವರಿ ಮಾಡಿದ್ದಾರೆ. ಆದರೆ, ಪ್ಯಾಕೇಜ್​ ತುಂಬಾ ತೂಕ ಇರುವುದನ್ನು ನೋಡಿ ಅನುಮಾನಗೊಂಡ ಅನಿಲ್​, ತಕ್ಷಣ ಅದನ್ನು ತೆರೆದು ನೋಡಿದ್ದಾರೆ. ಅದರಲ್ಲಿ ವಾಚ್​ ಬದಲಾಗಿ ಕಾಂಡೋಮ್​ ಜತೆಯಲ್ಲಿ ಕೆಲವು ವಸ್ತುಗಳು ಇರುವುದನ್ನು ನೋಡಿ ಅನಿಲ್​ ಶಾಕ್​ ಆಗಿದ್ದಾರೆ.

ಇದಾದ ತಕ್ಷಣ ಡೆಲಿವರಿ ಏಜೆಂಟ್​​ಗಳನ್ನು ತಮ್ಮ ಮನೆಯ ಆವರಣದಲ್ಲೇ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಇದು ಕಂಪನಿ ಮಾಡಿದ ಎಡವಟ್ಟ? ಅಥವಾ ಸಂಚು ರೂಪಿಸಿ ಮಾಡಿದ ವಂಚನೆಯಾ? ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರು ಡಿಲಿವರಿ ಏಜೆಂಟ್​ ಪೊಲೀಸ್​ ವಶದಲ್ಲಿದ್ದಾರೆ. (ಏಜೆನ್ಸೀಸ್​)