ಮುಂಬೈ: ಬಾಲಿವುಡ್ ನಟ ಆರ್.ಮಾಧವನ್(Madhavan) ಇತ್ತೀಚೆಗೆ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯಾವಾಗಲೂ ಅಸುರಕ್ಷಿತ ಭಾವನೆ ಹೊಂದಿರುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನ ಖರ್ಚುಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ಎಂದೂ ಹೇಳಿದ್ದಾರೆ. ಮಾಧವನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆರ್. ಮಾಧವನ್, ನನ್ನ ಬ್ಯಾಂಕ್ ಖಾತೆಯ ಬಗ್ಗೆ ನನಗೆ ನಿಜವಾಗಿಯೂ ಅಸುರಕ್ಷಿತವಾಗಿದೆ. ನನ್ನ ಬಳಿ ಎಷ್ಟು ಹಣವಿದೆ ಮತ್ತು ಅದನ್ನು ಎಷ್ಟು ಪರೀಕ್ಷಿಸಬಹುದೆಂದು ನನಗೆ ತಿಳಿದಿಲ್ಲ. ಏಕೆಂದರೆ ಅದರಿಂದ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಬ್ಯಾಂಕ್ ವಂಚನೆ ಪ್ರಕರಣಗಳನ್ನು ಚಿತ್ರಿಸುವ ಅವರ ಇತ್ತೀಚಿನ ಸಿನಿಮಾ 'ಹಿಸಾಬ್ ಬರಾಬರ್' ಅನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧವನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕೋವಿಡ್-19ರ ಸಮಯದಲ್ಲಿ ಮಗನ ಈಜು ತರಬೇತಿಗೆ ಸಹಾಯ ಮಾಡಲು ದುಬೈಗೆ ತೆರಳಿದ್ದೆ, ಆ ನಗರದಿಂದ ತಾನು ತುಂಬಾ ಪ್ರಭಾವಿತನಾಗಿದ್ದೇನೆಂದು ಹೇಳಿದ್ದಾರೆ. ನನಗೆ ಹೊಸ ವಿಚಾರಗಳನ್ನು ಕಲಿಯುವುದು ಎಂದರೆ ಇಷ್ಟ. ನಾನು ಕೋವಿಡ್ ಸಮಯಲ್ಲೆ ಕ್ಯಾಪ್ಟನ್ ಪರವಾನಗಿಯನ್ನು ಪಡೆದುಕೊಂಡೆ ಎಂದು ತಿಳಿಸಿದರು.
ನನ್ನ ಬಳಿ ಒಂದು ಸಣ್ಣ ದೋಣಿ ಇದೆ, ಅದು ನನ್ನ ಕುಟುಂಬಕ್ಕೆ ಸಾಕಾಗುತ್ತದೆ. ಆದರೆ ನಾನು ಯಾವಾಗಲೂ ಕ್ಯಾಪ್ಟನ್ ಪರವಾನಗಿ ಪಡೆಯಲು ಬಯಸುತ್ತಿದ್ದೆ. ನಾನು ಇದನ್ನು ಕೋವಿಡ್ ಸಮಯದಲ್ಲಿ ಕಲಿತಿದ್ದೇನೆ ಮತ್ತು ಅದು ನನಗೆ ಅಷ್ಟು ಕಷ್ಟವಾಗಲಿಲ್ಲ. 10-15 ದಿನಗಳ ಅಧ್ಯಯನ ಕೆಲವು ಪರೀಕ್ಷೆಗಳು ಮತ್ತು ನಂತರ ನನಗೆ ಪರವಾನಗಿ ಸಿಕ್ಕಿತು ಎಂದರು.
ಅಲ್ಲದೆ, ನಾನು ಹಣ ಖರ್ಚು ಮಾಡುವ ಬಗ್ಗೆ ಜಾಗರೂಕನಾಗಿರುವುದಿಲ್ಲ ಎಂದು ನನ್ನ ಹೆಂಡತಿ ಆಗಾಗ್ಗೆ ಹೇಳುತ್ತಾಳೆ. ಆದರೆ ನಾನು ಯಾವಾಗಲೂ ನನ್ನ ಮಿತಿಯೊಳಗೆ ಇರುತ್ತೇನೆ. ನನಗೆ ದುಬಾರಿ ವಸ್ತು ಖರೀದಿಸಬೇಕು ಅನಿಸಿ ಅದು ನನ್ನ ಬಜೆಟ್‌ಗೆ ಸರಿಹೊಂದದಿದ್ದರೆ, ನಾನು ಅದನ್ನು ಖರೀದಿಸುವುದಿಲ್ಲ ಎಂದು ಮಾಧವನ್ ಹೇಳಿದರು. ತನ್ನ ಬಳಿ ಪ್ರದರ್ಶಿಸಲು ಯಾವುದೇ ಭೌತಿಕ ಆಸ್ತಿ ಇಲ್ಲ ಆದರೆ ತಮ್ಮ ವೃತ್ತಿಪರ ಯಶಸ್ಸಿನ ಮೂಲಕ ಬರುವ ಖ್ಯಾತಿಯನ್ನು ಆನಂದಿಸುವುದಾಗಿ ಹೇಳಿದರು.
ಮಾಧವನ್ ತಮಿಳಿನ 'ಅಧಿರಷ್ಟಸಾಲಿ', 'ಟೆಸ್ಟ್' ಹಾಗೂ ಹಿಂದಿಯ 'ದೇ ದೇ ಪ್ಯಾರ್ ದೇ 2', 'ಕೇಸರಿ ಅಧ್ಯಾಯ 2', 'ಧುರಂಧರ್' ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ ಮಾಧವನ್ ದಿವಂಗತ ವಕೀಲ ಮತ್ತು ರಾಜಕಾರಣಿ ಸರ್ ಚೆಟ್ಟೂರ್ ಶಂಕರನ್ ನಾಯರ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಈ ಜೀವನಚರಿತ್ರೆಯು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಮಾಡಲ್ಪಟ್ಟಿದ್ದು, ಇದು ಮಾಧವನ್ ಅವರ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಬಹುದು ಎನ್ನಲಾಗಿದೆ.(ಏಜೆನ್ಸೀಸ್)