ನ್ಯೂಸ್

ರಾಕೆಟ್​ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಕುಟುಂಬಕ್ಕೆ ಕರೆ ಮಾಡಿ ಇಸ್ರೇಲ್​ ಅಧ್ಯಕ್ಷರು ಕೊಟ್ಟ ಮಾತಿದು..!

ತಿರುವನಂತಪುರಂ: ಇಸ್ರೇಲ್​ ಮೇಲೆ ನಡೆದ ಪ್ಯಾಲೇಸ್ಟಿನಿಯನ್ ರಾಕೆಟ್​ ದಾಳಿ ವೇಳೆ ದುರಂತ ಸಾವಿಗೀಡಾದ ಕೇರಳ ಮೂಲದ ಸೌಮ್ಯ ಸಂತೋಷ್​ ಕುಟುಂಬಕ್ಕೆ ಮಂಗಳವಾರ ಕರೆ ಮಾಡಿದ ಇಸ್ರೇಲ್​ ಅಧ್ಯಕ್ಷ ರುವೆನ್ ರಿವ್ಲಿನ್, ದುಃಖದ ಸಮಯದಲ್ಲಿ ಇಡೀ ರಾಷ್ಟ್ರ ನಿಮ್ಮ ಜತೆ ನಿಲ್ಲುವುದಾಗಿ ಧೈರ್ಯ ತುಂಬಿದರು.

ಸೌಮ್ಯ ಪತಿ ಸಂತೋಷ್​ ಅವರಿಗೆ ಫೋನಾಯಿಸಿದ ರಿವ್ಲಿನ್​, ಇಸ್ರೇಲ್​ ಸರ್ಕಾರ ಮತ್ತು ದೇಶದ ಜನರ ಪರವಾಗಿ ಸೌಮ್ಯ ಸಾವಿಗೆ ಸಂತಾಪ ಸೂಚಿಸಿದರು. ಅಲ್ಲದೆ, ಸರ್ಕಾರದಿಂದ ಅಗತ್ಯವಾದ ನೆರವು ನೀಡುವುದಾಗಿ ಇದೇ ವೇಳೆ ಸೌಮ್ಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂತೋಷ್​, ಅಧ್ಯಕ್ಷರೊಂದಿಗೆ ಮಾತನಾಡುವಾಗ ನನ್ನ ಪತ್ನಿ ಮೃತಳಾದ ಸ್ಥಳವನ್ನು ಒಮ್ಮೆ ನೋಡಬೇಕೆಂದು ಬಯಸಿರುವುದಾಗಿ ಕೇಳಿಕೊಂಡೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಧ್ಯಕ್ಷರು ಸಕಲ ವ್ಯವಸ್ಥೆ ಮಾಡಿ ಕರೆಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ನಾನು ಮತ್ತು ನನ್ನ ಮಗ ಇಸ್ರೇಲ್​ಗೆ ಭೇಟಿ ನೀಡಿದಾಗ ಸ್ವತಃ ಅವರೇ ನಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ರಾತ್ರಿ 1ಗಂಟೆ ಸುಮಾರಿಗೆ ಕರೆ ಮಾಡಿದ್ದಾಗಿ ಸಂತೋಷ್​ ಸಹೋದರಿ ಸೋಫಿ ಮಾಹಿತಿ ನೀಡಿದರು. ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾಗಿ ಹೇಳಿದರು. ಭಾಷಾ ಅನುವಾದಕರ ಸಹಾಯದಿಂದ ಮಾತನಾಡಿದೆವು ಎಂದು ತಿಳಿಸಿದರು.

ಸೌಮ್ಯ (31) ಆ್ಯಶ್​ಕೆಲೊನ್​ ನಗರದಲ್ಲಿ ವಾಸವಿದ್ದರು. ಮೇ 11ರ ಮಂಗಳವಾರ ಸಂಜೆ ತನ್ನ ಪತಿ ಸಂತೋಷ್​ರೊಂದಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡುತ್ತಿದ್ದರು. ಇದರ ಮಧ್ಯೆಯೇ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್​ ಗ್ರೂಪ್​ ನಡೆಸಿದ ರಾಕೆಟ್ ದಾಳಿಯ ವೇಳೆ ರಾಕೆಟ್​​ ನೇರವಾಗಿ ಸೌಮ್ಯ ಮನೆಯ ಮೇಲೇಯೇ ದಾಳಿ ಮಾಡಿತ್ತು. ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದ ಸೌಮ್ಯ, ಕಳೆದ 7 ವರ್ಷಗಳಿಂದ ಇಸ್ರೇಲ್​ನಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು.

ಸಂತೋಷ್​ ಸಹೋದರಿ ಸೋಫಿ ಸಹ ಕಳೆದ 13 ವರ್ಷಗಳಿಂದ ದಾದಿಯಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಕೇರಳಕ್ಕೆ ಮರಳಿದ್ದರು. ಫೋನ್​ ಕರೆಯ ಬಗ್ಗೆ ಮಾತನಾಡಿರುವ ಸೋಫಿ, ಇಸ್ರೇಲ್​ ಜನ ಹಾಗೂ ಸರ್ಕಾರದ ಪರವಾಗಿ ಸೌಮ್ಯ ಸಾವಿಗೆ ಸಂತಾಪ ಸೂಚಿಸಲು ಅಧ್ಯಕ್ಷರು ಕರೆ ಮಾಡಿದ್ದರು. ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಇನ್ನು ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲ್ ಜನರಲ್ ಜೊನಾಥನ್ ಜಡ್ಕಾ ಅವರು ಸೌಮ್ಯಾ ಅವರ ಕುಟುಂಬವನ್ನು ಭೇಟಿಯಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಜನರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಸೌಮ್ಯಾ ಓರ್ವ ದೇವತೆ ಎಂದು ಅವರು ಜಡ್ಕಾ ಅವರು ಮಾಧ್ಯಮಗಳಿಗೆ ತಿಳಿಸಿದ್ದರು. (ಏಜೆನ್ಸೀಸ್​)