ಬೊಗತಾ: ಬಂಗೀ ಜಿಗಿತ ಅಥವಾ ಬಂಗೀ ಜಂಪಿಂಗ್ ವೇಳೆ ರೋಪ್ ಅಳವಡಿಸುವುದಕ್ಕೂ ಮುನ್ನ ತಪ್ಪಾದ ಸಿಗ್ನಲ್ನಿಂದಾಗಿ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಕೊಲಂಬಿಯಾದಲ್ಲಿ ನಡೆದಿದೆ.
ಯೆಸಿನಿಯಾ ಮೊರಾಲೆಸ್ (25) ಮೃತ ದುರ್ದೈವಿ. ಉತ್ತರ ಕೊಲಂಬಿಯಾದಲ್ಲಿರುವ 40 ಮೀಟರ್ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾಳೆ. ಬಾಯ್ಫ್ರೆಂಡ್ ನೀಡಿದ "ಗೋ" ಸಿಗ್ನಲ್ನಿಂದ ಬಂಗೀ ಜಿಗಿತ ಮಾಡಿದ ಯುವತಿ ಸಾವಿನ ಕದ ತಟ್ಟಿದ್ದಾಳೆ.
ಸಂತ್ರಸ್ತೆ ಬಂಗೀ ಜಂಪ್ ಮಾಡಿರುವ ವಿಡಿಯೋವನ್ನು ಮತ್ತೊಬ್ಬ ಪ್ರವಾಸಿಗ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಸುಮಾರು 100 ಮಂದಿ ಬಂಗೀ ಜಂಪ್ ಮಾಡಲು 40 ಮೀಟರ್ ಎತ್ತರದ ಸೇತುವೇ ಮೇಲಿದ್ದರು. ಇದೇ ವೇಳೆ ಸಂತ್ರಸ್ತೆ ಯೆಸಿನಿಯಾ ತನ್ನ ಬಾಯ್ಫ್ರೆಂಡ್ ಜತೆಯಲ್ಲಿ ಬಂದಿದ್ದಳು.
ಬಂಗೀ ಜಂಪಿಂಗ್ ವೇಳೆ ತಮ್ಮ ಸರದಿ ಬಂದಾಗ ಮೊದಲು ಯೆಸಿನಿಯಾ ತೆರಳಿದಳು. ಅವಳ ಹಿಂದೆಯೇ ಬಾಯ್ಫ್ರೆಂಡ್ ಇದ್ದ. ಬಂಗೀ ರೋಪ್ ಅನ್ನು ಆಕೆಯ ಕಾಲುಗಳಿಗೆ ಇನ್ನು ಅಳವಡಿಸಿಯೇ ಇರಲಿಲ್ಲ. ಇದೇ ವೇಳೆ ಆಕೆಯ ಬಾಯ್ಫ್ರೆಂಡ್ "ಗೋ" ಎಂದು ಸಿಗ್ನಲ್ ನೀಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡ ಯೆಸಿನಿಯಾ ಸೇತುವೆಯಿಂದ ಕೆಳಗೆ ಜಿಗಿದಿದ್ದಾಳೆ. ಕೆಳಗೆ ಬೀಳುವಾಗ ಶಾಕ್ನಿಂದ ಗಾಳಿಯಲ್ಲೇ ಆಕೆಗೆ ತೀವ್ರ ಹೃದಯಾಘಾತವಾಗಿದೆ. ತುರ್ತುಸೇವೆ ಆಗಮಿಸುವಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಪ್ರೇಯಸಿ ಕಣ್ಣ ಎದುರಲ್ಲೇ ಪ್ರಪಾತಕ್ಕೆ ಬೀಳುವುದನ್ನು ನೋಡಿ ಎದೆಗುಂದಿದ ಬಾಯ್ಫ್ರೆಂಡ್ ಅವಳತ್ತ ಓಡಿ ಹೋಗಿ ಶ್ವಾಸಕೋಶ ಪ್ರಚೋದಕ (ಸಿಪಿಆರ್) ಮಾಡಲು ತೀವ್ರವಾಗಿ ಪ್ರಯತ್ನಿಸಿದ್ದಾನೆ. ಆದರೆ, ಏನೂ ಪ್ರಯೋಜನವಾಗಲಿಲ್ಲ. ತವರು ನೆಲ ಮೆಡೆಲಿನ್‌ನ ಸಿಮಾನ್ ಬೊಲಿವಾರ್ನಲ್ಲಿ ನಡೆದ ಸಮಾರಂಭದ ನಂತರ ಯೆಸಿನಿಯಾಳನ್ನು ಸಮಾಧಿ ಮಾಡಲಾಯಿತು. (ಏಜೆನ್ಸೀಸ್)