ವಿಜಯವಾಡ: ವಾಟ್ಸ್ಆ್ಯಪ್ನಲ್ಲಿ ಬಂದು ಸಂದೇಶವೊಂದನ್ನು ಫಾರ್ವಡ್ ಮಾಡಿದ್ದೇ ವ್ಯಕ್ತಿಯೊಬ್ಬನ ದುರಂತ ಸಾವಿಗೆ ಕಾರಣವಾಗಿದೆ. ಪೊಲೀಸ್ ತನಿಖೆಯ ಭಯದಿಂದಲೇ ತೆಲಂಗಾಣದ ನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್ (38) ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರಂನಲ್ಲಿ ದುರಂತ ನಡೆದಿದೆ.
ಶುಕ್ರವಾರ (ಮೇ 14) ತೀವ್ರ ಅನಾರೋಗ್ಯದಿಂದ ಶ್ರೀನಿವಾಸ್ ಮೃತಪಟ್ಟಿದ್ದು, ಮೃತನ ಪತ್ನಿ ಪದ್ಮಾ ಅವರು ತನ್ನ ಗಂಡನ ಸಾವಿಗೆ ಪೊಲೀಸರ ಕಿರುಕುಳವೇ ಕಾರಣ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೂರ್ವ ಗೋದಾವರಿಯ ಅಮಲಾಪುರದ ಅಕ್ವಾ ಕಂಪನಿಯಲ್ಲಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಶ್ರೀನಿವಾಸ್ ಮೊಬೈಲ್ಗೆ ವಾಟ್ಸ್ಆ್ಯಪ್ ಸಂದೇಶವೊಂದು ಬಂದಿತ್ತು. ಅದರಲ್ಲಿ ಕೋಳಿಗಳಲ್ಲೂ ಕರೊನಾ ಸೋಂಕು ಕಂಡುಬಂದಿದೆ ಎಂಬ ಸಂದೇಶವಿತ್ತು. ಇದು ದುರುದ್ದೇಶದ ಸಂದೇಶವಾಗಿದ್ದು, ಸ್ವಲ್ಪವೂ ಯೋಚಿಸದೇ ಶ್ರೀನಿವಾಸ್ ಬೇರೆ ಗ್ರೂಪ್ಗಳಿಗೆ ಅದನ್ನು ಫಾರ್ವರ್ಡ್ ಮಾಡಿದ್ದ.
ಇದಾದ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಶ್ರೀನಿವಾಸ್ಗೆ ಕರೆ ಮಾಡಿ ವಾಟ್ಸ್ಆ್ಯಪ್ ಸಂದೇಶದ ಬಗ್ಗೆ ಪ್ರಶ್ನಿಸಿದ್ದರು. ಆದರೆ, ಆ ಬಗ್ಗೆ ನನಗೇನು ತಿಳಿದಿಲ್ಲ ಎಂದು ಉತ್ತರಿಸಿದ್ದ. ಆದರೆ, ಪೊಲೀಸರು ಮತ್ತೆ ಕರೆ ಮಾಡಬಹುದು, ತನಿಖೆ ಮಾಡಬಹುದು ಎಂಬ ಭಯದಿಂದ ಕುಸಿದುಬಿದ್ದಿದ್ದ. ತಕ್ಷಣ ಆತನನ್ನು ಅಮಲಾಪುರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ ಒಂದೇ ಗಂಟೆಯಲ್ಲಿ ಶ್ರೀನಿವಾಸ್ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀನಿವಾಸ್ ಪತ್ನಿ ಪದ್ಮಾ, ಪೊಲೀಸರು ಫೋನ್ನಲ್ಲಿ ಬೆದರಿಸಿ, ಇದು ದೊಡ್ಡ ಕೇಸ್ ಆಗಲಿದೆ ಎಂದು ಬೆದರಿಸಿದರು. ಇದರಿಂದ ಹೆದರಿ ನನ್ನ ಪತಿ ಮೃತಪಟ್ಟಿದ್ದಾರೆ. ಸೈಬರ್ ಕ್ರೈಮ್ ಸಿಐ ರಾಜೇಶ್, ಎಸ್ಐ ರಂಜಿತ್ ಕುಮಾರ್ ಪತಿ ಮಾನಸಿಕ ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾರೆ.
ಪತಿಯನ್ನು ಕಳೆದುಕೊಂಡಿರುವ ಪದ್ಮಾ ಇದೀಗ 9 ವರ್ಷದ ಮಗ ಮತ್ತು 7 ವರ್ಷದ ಮಗಳ ಜವಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದ್ದು, ಕುಟುಂಬದಲ್ಲಿ ಆಕ್ರಂದನ ನೀರವ ಮೌನ ಆವರಿಸಿದೆ. (ಏಜೆನ್ಸೀಸ್)