ನ್ಯೂಸ್

ಪತ್ನಿಯನ್ನು ಅಟ್ಟಾಡಿಸಿ ಹೊಡೆದ ಕಾನ್ಸ್​ಟೇಬಲ್​: ವಿಡಿಯೋ ಮೂಲಕ ಗಂಡನ ಮುಖವಾಡ ಕಳಚಿದ ಸಂತ್ರಸ್ತೆ

ವಿಜಯವಾಡ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ತನ್ನ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಕಂಚಿಕಚರ್ಲ ವಲಯದ ಕೀಸರ ಗ್ರಾಮದಲ್ಲಿ ನಡೆದಿದೆ.

ಕಾನ್ಸ್​ಟೇಬಲ್​ ಸುನೀಲ್ ಕೀಸರ ಗ್ರಾಮದ ನಿವಾಸಿ. ಈತನ ತಾಯಿ ಇತ್ತೀಚೆಗೆ ಆಡಳಿತಾರೂಢ ಪಕ್ಷದಿಂದ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಪತ್ನಿ ನವ್ಯಾ ಮತ್ತು ಸುನೀಲ್​ ನಡುವೆ ಆಗಾಗ ಜಗಳಗಳಾಗುತ್ತಿದ್ದವು. ಇದರ ನಡುವೆ ಇಂದು ಇಬ್ಬರ ಮಧ್ಯೆ ಉಂಟಾದ ಜಗಳದಲ್ಲಿ ಸುನೀಲ್​, ನವ್ಯಾರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ.

ಗಾಯಗೊಂಡಿದ್ದ ನವ್ಯಾಳನ್ನು ಸಂಬಂಧಿಕರು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವಿಡಿಯೋ ಮೂಲಕ ನವ್ಯಾ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಗಂಡ ಹಲ್ಲೆ ಮಾಡಲು ಅತ್ತೆಯೇ ಪ್ರಚೋದನೆ ನೀಡಿದರು ಎಂದು ಆರೋಪಿಸಿದ್ದಾಳೆ.

ಪತಿಗೆ ಜೋಗಯ್ಯಪೇಟೆ ಮೂಲದ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ. ಇಬ್ಬರ ಸಂಬಂಧಕ್ಕೆ ನಾನು ಅಡ್ಡಿಯಾಗಿರುವುದರಿಂದ ಮೊದಲ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆಂದು ದೂರಿದ್ದಾಳೆ. ಇದೀಗ ಸುನೀಲ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ನವ್ಯಾ ಮೇಲೆ ಆಗಿರುವ ದಾಳಿಯ ಬೆನ್ನಲ್ಲೇ ಆಕೆಯ ಬೆನ್ನಿಗೆ ನಿಂತಿರುವ ಮಹಿಳಾ ಸಂಘಟನೆಗಳು ಆರೋಪಿ ಕಾನ್ಸ್​ಟೇಬಲ್​ ಸುನೀಲ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆಲಸದಿಂದ ವಜಾಗೊಳಿಸಲು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)