ಮದ್ವೆಯಾದ ಎರಡೇ ದಿನದಲ್ಲಿ ಗಂಡನಿಗೆ ಶಾಕ್​ ಕೊಟ್ಟ ಪತ್ನಿ: ಮಲಗಿದ್ದಾಗ ಹಗ್ಗದಿಂದ ಕಟ್ಟಿಹಾಕಿ ಪರಾರಿ!

Bihar Lovers
Published on

ಬೆಂಗಳೂರು/ಪಟನಾ: ಕೆಲವು ವರ್ಷಗಳಿಂದ ಯುವಕನೊಬ್ಬ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಯುವತಿಗೆ ಪ್ರಿಯಕರನನ್ನು ಬಿಟ್ಟು ಬೇರೆಯೊಬ್ಬನ ಜತೆ ಮದುವೆ ಆಗಲು ಇಷ್ಟವಿರಲಿಲ್ಲ. ಆದಾಗ್ಯೂ ಪಾಲಕರು ಬಲವಂತದಿಂದ ಬೇರೊಬ್ಬನ ಜತೆ ಯುವತಿಗೆ ಮದುವೆ ಮಾಡಿದ್ದರು.

ಪ್ರಿಯಕರನಿಲ್ಲದ ಜೀವನವನ್ನು ಊಹಿಸಿಕೊಳ್ಳಲು ಆಗದ ಯುವತಿ ಮದುವೆಯಾದ ಎರಡೇ ದಿನದಲ್ಲಿ ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಓಡಿಹೋಗಲು ನಿರ್ಧರಿಸಿ, ಪ್ರಿಯಕರನೊಂದಿಗೆ ರೈಲ್ವೆ ನಿಲ್ದಾಣದಲ್ಲೇ ಮದುವೆಯಾದ ಬಳಿಕ ಬೆಂಗಳೂರಿಗೆ ಹೊರಡುವ ರೈಲು ಹತ್ತಿ ಬಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ವಿವರಣೆಗೆ ಬರುವುದಾದರೆ, ಅನುಕುಮಾರಿ ಮತ್ತು ಆಶು ಕುಮಾರ್​ ಇಬ್ಬರು ಬಿಹಾರದ ಮೂಲದವರು. ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅನುಕುಮಾರಿಯ ಪಾಲಕರಿಗೆ ಮಗಳ ಪ್ರೀತಿ ಇಷ್ಟವಿರಲಿಲ್ಲ. ಹೀಗಾಗಿ ಎರಡು ತಿಂಗಳ ಹಿಂದೆ ಕಿರಣ್​ಪುರ ಗ್ರಾಮದ ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿತ್ತು.

ಆದರೆ, ಅನುಗೆ ಬೇರೊಬ್ಬನನ್ನು ಗಂಡನಾಗಿ ಸ್ವೀಕರಿಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಮದುವೆಯಾದ ಎರಡೇ ದಿನದಲ್ಲಿ ಮನೆಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ರಾತ್ರಿ ಮಲಗಿದ್ದ ವೇಳೆ ಗಂಡನನ್ನು ಕಟ್ಟಿಹಾಕಿ ಮನೆಯಿಂದ ಓಡಿಬಂದಿದ್ದಾಳೆ. ತದನಂತರದಲ್ಲಿ ಆಶುಕುಮಾರನೊಂದಿಗೆ ಸುಲ್ತಾನ್​ಗಂಜ್​ ರೈಲ್ವೆ ನಿಲ್ದಾಣದಲ್ಲಿ ಮದುವೆ ಆಗಿದ್ದಾಳೆ.

ಇದಾದ ಬಳಿಕ ಇಬ್ಬರು ಒಟ್ಟಿಗೆ ಬೆಂಗಳೂರು ಮೂಲದ ರೈಲನ್ನೇರಿದರು. ಇದು ನಡೆದು ಎರಡು ತಿಂಗಳಾಗಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net