ನ್ಯೂಸ್

ಸವಿ ನಿದ್ರೆಯಲ್ಲಿದ್ದ ದಂಪತಿಗೆ ಕೇಳಿತು ಬಾಗಿಲು ಮುರಿತದ ಶಬ್ದ: ಎಚ್ಚರಗೊಂಡವರಿಗೆ ಕಾದಿತ್ತು ಬಿಗ್​ ಶಾಕ್​!

ಅಥೆನ್ಸ್​: ದರೋಡೆಕೋರರ ಗುಂಪೊಂದು ಮನೆಯೊಂದರ ಮೇಲೆ ದಾಳಿ ಮಾಡಿದ್ದಲ್ಲದೆ, ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿ ಆಕೆಯ ಗಂಡ ಮತ್ತು 11 ತಿಂಗಳ ಹೆಣ್ಣು ಮಗುವಿನ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರೀಸ್​ನಲ್ಲಿ ನಡೆದಿದೆ.

ಕರೊಲಿನ್​ ಕ್ರೌಚ್​ (20) ಮೃತ ಮಹಿಳೆ. ಈಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಈ ಘಟನೆ ಗ್ರೀಸ್​ನ ಅಥೆನ್ಸ್​ ಉಪನಗರದ ಬಳಿಯಿರುವ ಗ್ಲೈಕಾ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮೃತ ಕರೊಲಿನ್, ಪತಿ ಚಾರಲಂಬೊಸ್​ ಬೆಬಿಸ್​ ಅನಾಗ್ನೊಸ್ಟೊಪೌಲೊಸ್​ ಮತ್ತು 11 ತಿಂಗಳ ಹೆಣ್ಣು ಮಗುವಿನ ಜಹೆ ಸಂತೋಷವಾಗಿ ಸಂಸಾರ ನಡೆಸುತ್ತಿದ್ದರು.

ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮೂವರು ವ್ಯಕ್ತಿಗಳು ಮಂಗಳವಾರ ನಸುಕಿನ ಜಾವ ಸುಮಾರು 5 ಗಂಟೆಯ ವೇಳೆಗೆ ಮನೆಯ ಬಾಗಿಲು ಹೊಡೆದು ಒಳಗೆ ನುಗ್ಗಿದ್ದಾರೆ. ಈ ವೇಳೆ ಇನ್ನು ನಾಲ್ವರು ದುಷ್ಕರ್ಮಿಗಳು ಮನೆಯ ಬಳಿ ಯಾರು ಬರದಂತೆ ಹೊರಗಡೆ ಕಾವಲು ಕಾದಿದ್ದಾರೆ.

ಮನೆಯ ಒಳಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಮೊದಲು ಸಾಕು ನಾಯಿಯನ್ನು ಕೊಂದಿದ್ದಾರೆ. ಬಳಿಕ ಹೆಲಿಕಾಪ್ಟರ್​ ಪೈಲಟ್​ ಆಗಿರುವ ಕರೊಲಿನಾ ಪತಿ ಬೆಬಿಸ್​ನನ್ನು ಕಟ್ಟಿ ಹಾಕಿ, ಬೆಲೆಬಾಳುವ ವಸ್ತುಗಳಿರುವ ಸ್ಥಳದ ಮಾಹಿತಿಗಾಗಿ ಸುಮಾರು ಒಂದು ಗಂಟೆಗಳ ಕಾಲ ಕರೊಲಿನ್​ಳನ್ನು ಹಿಂಸಿಸಿದ್ದಾರೆ. ಮಾಹಿತಿಯನ್ನು ಪಡೆದುಕೊಂಡ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ನಂತರ ಸುಮಾರು 21,500 ಪೌಂಡ್​ (22,29,273 ರೂಪಾಯಿ) ಮೌಲ್ಯದ ಆಭರಣಗಳು ಮತ್ತು 13,000 ಪೌಂಡ್ (13,47,975 ರೂಪಾಯಿ) ನಗದು ಕದ್ದು ದರೋಡೆಕೋರರು ಅಲ್ಲಿಂದ ಪರಾರಿ ಆಗಿದ್ದಾರೆ.

ಈ ಘಟನೆಯಿಂದ ಬೆಚ್ಚಿಬಿದ್ದಿರುವ ಗ್ರೀಸ್​ ಸರ್ಕಾರ ದರೋಡೆಕೋರರ ಬಗ್ಗೆ ಸುಳಿವು ನೀಡಿದರೆ 288,000 ಪೌಂಡ್​ (2,67,59,631 ರೂಪಾಯಿ) ಬಹುಮಾನ ಘೋಷಿಸಿದೆ.

ಕಣ್ಣ ಮುಂದೆಯೇ ಪತ್ನಿಯ ಹತ್ಯೆ ಕಂಡು ಆಘಾತಕ್ಕೆ ಒಳಗಾಗಿರುವ ಕರೊಲಿನಾ ಪತಿ ಬೇಬಿಸ್​, ದರೋಡೆಕೋರರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಿರುವ ಗ್ರೀಸ್​ ಪೊಲೀಸ್​ ಇಲಾಖೆ ತನಿಖೆಯನ್ನು ಆರಂಭಿಸಿದೆ. (ಏಜೆನ್ಸೀಸ್​)