ಸೋಂಕಿತರ ಜೀವ ಹಿಂಡುತ್ತಿರುವ ‘ಬ್ಲ್ಯಾಕ್ ಫಂಗಸ್‌‘ಗೆ ಮಹಾರಾಷ್ಟ್ರ ಸುಸ್ತು- ಪ್ರತ್ಯೇಕ ಆಸ್ಪತ್ರೆ ಮೀಸಲು

maharashtra-black fungus
Published on

ಮುಂಬೈ : ಕರೊನಾ ಎರಡನೆಯ ಅಲೆ ಅದೆಷ್ಟು ಜೀವಗಳನ್ನು ಬಲಿಪಡೆಯುತ್ತಿವೆಯೋ ಲೆಕ್ಕವೇ ಇಲ್ಲ. ಇಡೀ ಕುಟುಂಬಕ್ಕೆ ಕುಟುಂಬವೇ ಬಲಿಯಾಗಿವೆ, ಅದೆಷ್ಟೋ ಕಂದಮ್ಮಗಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿವೆ. ಈ ವೈರಸ್‌ ತಡೆಗಟ್ಟಲು ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಇದೀಗ ಸೋಂಕಿತರಲ್ಲಿ ಬ್ಲ್ಯಾಕ್‌ ಫಂಗಸ್‌ ಎನ್ನುವ ಸೋಂಕು ಕಾಣಿಸಿಕೊಳ್ಳಲು ಶುರುವಾಗಿದೆ.

ಇದಾಗಲೇ ಹಲವಾರು ಸೋಂಕಿತರಲ್ಲಿ ಹಾಗೂ ಸೋಂಕಿನಿಂದ ಚೇತರಿಸಿಕೊಂಡವರಲ್ಲಿಯೂ ಇದು ಕಾಣಿಸಿಕೊಳ್ಳುತ್ತಿದೆ. ಮುಂಬೈ ಒಂದರಲ್ಲಿಯೇ ಎರಡು ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರಲ್ಲಿ ಇದು ಕಾಣಿಸಿಕೊಂಡಿದ್ದು, ಇದಾಗಲೇ ಇಬ್ಬರು ಬ್ಲ್ಯಾಕ್‌ ಫಂಗಸ್‌ಗೆ ಬಲಿಯಾಗಿದ್ದಾರೆ.

ಆದ್ದರಿಂದ ಈ ಸೋಂಕಿತರಿಗೆ ಪ್ರತ್ಯೇಕವಾದ ಆಸ್ಪತ್ರೆ ಮೀಸಲು ಇಡಲು ನಿರ್ಧರಿಸಿರುವ ಮಹಾರಾಷ್ಟ್ರ ಸರ್ಕಾರ, ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಆಸ್ಪತ್ರೆಗಳನ್ನು ಬಳಸಲು ಮುಂದಾಗಿದೆ. ಈ ಕುರಿತು ಆರೋಗ್ಯ ಸಚಿವ ರಾಜೇಶ್ ಟೋಪ್ ಹೇಳಿದ್ದಾರೆ.

ಏನಿದು ಬ್ಲ್ಯಾಕ್‌ ಫಂಗಸ್‌: ಕಪ್ಪು ಶಿಲೀಂಧ್ರ ಎಂದೂ ಇದನ್ನು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಮ್ಯೂಕಾರ್ಮೈಕಾಸಿಸ್. ಸೋಂಕಿತರಲ್ಲಿ ಹಾಗೂ ಚೇತರಿಸಿಕೊಳ್ಳುತ್ತಿರುವವರಲ್ಲಿ ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗು ಅಥವಾ ಸೈನಸ್ ದಟ್ಟಣೆ ಮತ್ತು ಭಾಗಶಃ ದೃಷ್ಟಿ ನಷ್ಟ ಉಂಟಾಗುತ್ತವೆ. ಇದು ತಗುಲಿದೆ ಶೇ 50ರಷ್ಟು ಮಂದಿ ಮೃತಪಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net