ಚೆನ್ನೈ: ನಿನ್ನೆ (ಡಿ.8) ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ ಸಿಬ್ಬಂದಿಯ ಪಾರ್ಥೀವ ಶರೀರಗಳನ್ನು ಮದ್ರಾಸ್ ರೆಜಿಮೆಂಟ್ ಸೆಂಟರ್‌ಗೆ ಸ್ಥಳಾಂತರಿಸಲಾಗಿದ್ದು, ಗೌರವ ವಂದನೆಗಳನ್ನು ಸಲ್ಲಿಸಲಾಗಿದೆ.
ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಮದ್ರಾಸ್ ರೆಜಿಮೆಂಟ್ ಸೆಂಟರ್‌ಗೆ 13 ಪಾರ್ಥೀವ ಶರೀರಗಳನ್ನು ಪುಷ್ಪಾಲಂಕೃತ ವಾಹನಗಳಲ್ಲಿ ಸ್ಥಳಾಂತರಿಸಲಾಗಿದೆ. ಗೌರವ ವಂದನೆಗಾಗಿ ವಿವಿಧ ತುಕಡಿಗಳ ಪಥ ಸಂಚಲನದೊಂದಿಗೆ ಪಾರ್ಥೀವ ಶರೀರಗಳನ್ನು ಸ್ಥಳಾಂತರ ಮಾಡಲಾಯಿತು.
ಮದ್ರಾಸ್ ರೆಜಿಮೆಂಟ್ ಸೆಂಟರ್ನಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್, ಸೇನಾಧಿಕಾರಿಗಳು ಹಾಗೂ ಗಣ್ಯರು ಗೌರವ ವಂದನೆ ಸಲ್ಲಿಸಿದರು.
ಗೌರವ ವಂದನೆ ಬಳಿಕ ರಸ್ತೆ ಮಾರ್ಗವಾಗಿ ಪಾರ್ಥೀವ ಶರೀರಗಳನ್ನು ಸೂಳೂರು ಏರ್ಬೇಸ್ಗೆ ರವಾನಿಸಿ, ಅಲ್ಲಿಂದ ದೆಹಲಿಗೆ ರವಾನಿಸಲಾಗುತ್ತದೆ. ಇಂದು ಮಧ್ಯಾಹ್ನದ ಮಧ್ಯಾಹ್ನದ ಹೊತ್ತಿಗೆ ಏರ್‌ಲಿಫ್ಟ್ ಮಾಡುವ ಸಾಧ್ಯತೆ ಇದೆ. ದೆಹಲಿ ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ನಾಯಕರು ಅಂತಿಮ ದರ್ಶನ ಪಡೆಯಲಿದ್ದು, ಸೇನಾ ಗೌರವದೊಂದಿಗೆ ನಾಳೆ ಹುತಾತ್ಮತರ ಅಂತಿಮ ಕ್ರಿಯೆ ನಡೆಯಲಿದೆ. (ಏಜೆನ್ಸೀಸ್)