ನ್ಯೂಸ್

ಅದ್ಧೂರಿಯಾಗೇ ನಡೆಯಿತು ಕಿರಿಮಗಳ ಮದ್ವೆ: ಮೂರೇ ತಿಂಗಳಲ್ಲಿ ಅಪ್ಪ, ಅಮ್ಮ, ಅಣ್ಣನ ದುರಂತ ಸಾವು

ಹೈದರಾಬಾದ್​: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ತೆಲಂಗಾಣದ ಕರೀಮ್​ನಗರದಲ್ಲಿ ಸೋಮವಾರ (ಫೆ.7) ನಡೆದಿದೆ.

ಬೈರಿ ಶಂಕರಯ್ಯ (55) ಮತ್ತು ಜಮುನಾ (50) ದಂಪತಿ ಕರೀಮ್​ನಗರದ ಕಂಟಪಲ್ಲಿಯ ನಿವಾಸಿಗಳು. ಕೈಮಗ್ಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ. ಇದೀಗ ಶಂಕರಯ್ಯ ಮತ್ತು ಜಮುನಾ ದಂಪತಿ ಮಗ ಶ್ರೀಧರ್ (25)​ ಜತೆಗೂಡಿ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳಿಗೂ ಈಗಾಗಲೇ ಮದುವೆ ಮಾಡಿಕೊಡಲಾಗಿದೆ. ಕಿರಿಯ ಮಗಳಿಗೆ ಮೂರು ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆ ಆಗಿತ್ತು. ಇದೀಗ ಮೂವರು ಸಾವಿಗೀಡಾಗಿದ್ದು, ಹೆಣ್ಣು ಮಕ್ಕಳಿಗೆ ತವರು ಮನೆ ಶಾಶ್ವತವಾಗಿ ಇಲ್ಲದಂತಾಗಿದೆ. ಸಾಲದ ಸುಳಿಯಲ್ಲೇ ಸಿಲುಕಿದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)