ಕರೊನಾಗೆ ಗಂಡ ಬಲಿ: ಕಂಗಾಲಾದ ಪತ್ನಿ-ಮಗ: ವಿಧವೆಗೆ ಬಾಳು ಕೊಟ್ಟು ಮಾದರಿಯಾದ ಮೃತನ ಸ್ನೇಹಿತ!

wedding kollegala
Published on

ಕೊಳ್ಳೇಗಾಲ: ಮಹಾಮಾರಿ ಕರೊನಾದಿಂದ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದ ಮಹಿಳೆಗೆ ಮೃತನ ಸ್ನೇಹಿತ ಹೊಸ ಬಾಳು ನೀಡಿದ್ದಾನೆ. ಆಕೆಗೆ 7 ವರ್ಷದ ಮಗನಿದ್ದರೂ ಕೈಹಿಡಿದು ದಿಕ್ಕೆಟ್ಟವರಿಗೆ ಆಸರೆಯಾಗಿದ್ದಾನೆ. ಇಂತಹ ಪ್ರಸಂಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಸಾರ್ವಜನಕಿರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ. ಸಂಸಾರ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

ಮಳ್ಳೂರಿನ ಗ್ರಾಮದ ನಿವಾಸಿ ಚೇತನ್​ ಕುಮಾರ್​(41) ಮತ್ತು ಹನೂರಿನ ಅಂಬಿಕಾ(30) ಅವರು 8 ವರ್ಷದ ಹಿಂದೆ ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇವರಿಗೆ 7 ವರ್ಷದ ಮಗನಿದ್ದಾನೆ. ಕೋವಿಡ್​ 2ನೇ ಅಲೆಯಲ್ಲಿ ಚೇತನ್​ಕುಮಾರ್​ ಮೃತಪಟ್ಟರು.

ಗಂಡನ ಸಾವಿನಿಂದ ಅಂಬಿಕಾ ಮಾನಸಿಕವಾಗಿ ಅಸ್ವಸ್ಥರಾದರು. ಅವರನ್ನು ಸಂತೈಸುವಲ್ಲಿ ಮೃತ ಚೇತನ್​ಕುಮಾರ್​ ಸ್ನೇಹ ಬಳಗ ಸಾಕಷ್ಟು ಶ್ರಮಿಸಿತು. ಕಂಗಾಲಾಗಿದ್ದ ಅಂಬಿಕಾ ಅವರಿಗೆ ಹೊಸ ಬಾಳು ನೀಡುವ ನಿಟ್ಟಿನಲ್ಲಿ ಚಾಮರಾಜನಗರ ತಾಲೂಕಿನ ನಂಜೇದೇವನಪುರದ ಲೋಕೇಶ್​ ಸಂಕಲ್ಪ ಮಾಡಿದರು. ಜ.27ರಂದು ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ ಅಂಬಿಕಾ ಅವರನ್ನು ವಿವಾಹವಾಗಿ ಮಾನವೀಯತೆ ಮೆರೆದರು.

ಚೇತನ್​ಕುಮಾರ್​ ಮತ್ತು ಲೋಕೇಶ್​ಗೆ 13 ವರ್ಷದ ಹಿಂದಿನಿಂದಲೂ ಗೆಳೆತನವಿತ್ತು. ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಹಾಸ್ಟೆಲ್​ನಲ್ಲಿ ಇಬ್ಬರೂ ಒಟ್ಟಿಗಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಸರ್ಪಭೂಷಣ ಶಿವಯೋಗಿ ಸಂಸ್ಥೆಯಲ್ಲೇ ಲೋಕೇಶ್​ ಉದ್ಯೋಗ ಆರಂಭಿಸಿದರು. ಚೇತನ್​ ಕುಮಾರ್​ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದರೂ ಇಬ್ಬರ ನಡುವೆ ಸ್ನೇಹ ಮುಂದುವರಿದಿತ್ತು. ಸ್ನೇಹಿತನ ಪತ್ನಿ ಅತಂತ್ರವಾಗಬಾರದು ಎಂಬ ಧ್ಯೇಯದಿಂದ ಆಕೆಗೆ ಲೋಕೇಶ್​ ಹೊಸ ಬಾಳು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net