ನ್ಯೂಸ್

ಚಾಮರಾಜನಗರ ದುರಂತ ಬೆನ್ನಲ್ಲೇ ಮತ್ತೊಂದು ದುರ್ಘಟನೆ: ಆಕ್ಸಿಜನ್​ ಕೊರತೆಯಿಂದ 11 ರೋಗಿಗಳ ಸಾವು

ವಿಜಯವಾಡ: ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ಮಾಸುವ ಮುನ್ನವೇ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಅನಾಹುತ ಸಂಭವಿಸಿದ್ದು, ಆಕ್ಸಿಜನ್ ಪೂರೈಕೆಗೆ ಅಡ್ಡಿ ಉಂಟಾಗಿ​ 11 ರೋಗಿಗಳು ಮೃತಪಟ್ಟಿರುವ ಘಟನೆ ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.

ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಆಕ್ಸಿಜನ್​ ಸಿಲಿಂಡರ್​ ಮರುಭರ್ತಿ ಮಾಡಲು ಕೇವಲ 5 ನಿಮಿಷ ತಡವಾಗಿದ್ದಕ್ಕೆ ಆಕ್ಸಿಜನ್​ ಒತ್ತಡ ಕಡಿಮೆಯಾಗಿ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ವೈದ್ಯರಾದ ಹರಿ ನಾರಾಯಣ್​ ತಿಳಿಸಿದ್ದಾರೆ.

ಐದು ನಿಮಿಷಗಳಲ್ಲಿ ಆಮ್ಲಜನಕದ ಪೂರೈಕೆಯನ್ನು ಪುನಃಸ್ಥಾಪಿಸಲಾಯಿತು. ಇದೀಗ ಎಲ್ಲವೂ ಸಾಮಾನ್ಯವಾಗಿದೆ. ಈ ಕಾರಣದಿಂದಾಗಿ ಹೆಚ್ಚಿನ ಸಾವುನೋವುಗಳನ್ನು ತಡೆಯಬಹುದು ಎಂದು ವೈದ್ಯರು ಹೇಳಿದ್ದಾರೆ.

ಆಕ್ಸಿಜನ್​ ಕೊರತೆಯಾದ ಬೆನ್ನಲ್ಲೇ ಸುಮಾರು 30 ವೈದ್ಯರು ಐಸಿಯು ಧಾವಿಸಿ ಬಂದು ಮುಂದಾಗುತ್ತಿದ್ದ ಬಹುದೊಡ್ಡ ಅನಾಹುತವನ್ನು ತಪ್ಪಿಸಿದರು. ಇಲ್ಲದಿದ್ದಲ್ಲಿ ಇನ್ನು ಹೆಚ್ಚಿನ ಸಾವಾಗುವ ಸಾಧ್ಯತೆ ಇತ್ತು.

ಈ ಘಟನೆ ಬಗ್ಗೆ ತನಿಖೆ ನಡೆಸಿ, ಬಹು ಬೇಗ ವರದಿ ನೀಡುವಂತೆ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಆದೇಶ ನೀಡಿದ್ದಾರೆ. ಅಲ್ಲದೆ, ತಕ್ಷಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವಾರವಷ್ಟೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದಾಗಿ 24 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ. (ಏಜೆನ್ಸೀಸ್​)