More

    ಲಸಿಕೆಗೆ ಇನ್ನೂ 3 ತಿಂಗಳು ಕಾಯಬೇಕು! ಕೋವಿನ್ ಪೋರ್ಟಲ್​ನಲ್ಲಿ ಹೆಸರು ನೋಂದಾಯಿಸಿದವರ ಸಂಖ್ಯೆ 19 ಕೋಟಿಗೂ ಅಧಿಕ

    ನವದೆಹಲಿ: ದೇಶದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕಾರಣ ಜನರು ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಲಸಿಕೆ ಕೇಂದ್ರದ ಎದುರು ಜನರು ಸರತಿಯಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಇದೇ ವೇಳೆ ಲಸಿಕೆ ಕೊರತೆ ಎದುರಾಗಿದೆ. ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದೆ. ಲಸಿಕೆ ಅಭಿಯಾನ ವೇಗ ಇದೇ ರೀತಿ ಮುಂದುವರಿದರೆ ಲಸಿಕೆ ನೀಡಿಕೆ ಗುರಿ ತಲುಪಲು ಭಾರಿ ವಿಳಂಬವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

    ಲಸಿಕೆ ಹಾಕಿಸಿಕೊಳ್ಳಲು ಕೋವಿನ್ ಪೋರ್ಟಲ್​ನಲ್ಲಿ ಇದುವರೆಗೆ ಹೆಸರು ನೋಂದಾಯಿಸಿರುವವರ ಸಂಖ್ಯೆ 19 ಕೋಟಿ ದಾಟಿದೆ. ಇವರಿಗೆ ಲಸಿಕೆ ನೀಡಲು ಕನಿಷ್ಠ 3 ತಿಂಗಳು ಬೇಕು ಎನ್ನಲಾಗದೆ. ಮೊದಲ ಹಾಗೂ ಎರಡನೇ ಡೋಸ್ ಸಹಿತ ಲಸಿಕೆ ಹಾಕುವ ಪ್ರಮಾಣ ಕೂಡ ಕಳೆದ ಒಂದು ವಾರದಿಂದ ಸರಾಸರಿ 16.6 ಲಕ್ಷಕ್ಕೆ ಕುಸಿದಿದೆ. ಏಪ್ರಿಲ್ ಆರಂಭದಲ್ಲಿ ಪ್ರತಿ ದಿನ 40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ಹಾಕಲಾಗುತ್ತಿತ್ತು.

    9 ಲಕ್ಷ ಡೋಸ್: ದೇಶದಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದ್ದು ಮುಂದಿನ 72 ಗಂಟೆಗಳಲ್ಲಿ ರಾಜ್ಯಗಳಿಗೆ ಇನ್ನೂ 9 ಲಕ್ಷ ಡೋಸ್ ಲಸಿಕೆ ಪೂರೈಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ. ಕೇಂದ್ರ ಇದುವರೆಗೆ 17,93,57,860 ಡೋಸ್ ಲಸಿಕೆಯನ್ನು ರಾಜ್ಯಗಳಿಗೆ ಉಚಿತವಾಗಿ ಸರರಾಜು ಮಾಡಿದೆ.

    ನೇರ ಪೂರೈಕೆ ಆರಂಭ: ಕೇಂದ್ರದ ಹಂಚಿಕೆ ಆಧಾರದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು 14 ರಾಜ್ಯಗಳಿಗೆ ನೇರವಾಗಿ ಸರಬರಾಜು ಮಾಡುವ ಪ್ರಕ್ರಿಯೆಯನ್ನು ಭಾರತ್ ಬಯೋಟೆಕ್ ಕಂಪನಿ ಮೇ 1ರಿಂದಲೇ ಆರಂಭಿಸಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕಿ ಸುಚಿತ್ರಾ ಎಲ್ಲಾ ಹೇಳಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕ ಇಲ್ಲ.

    3.66 ಲಕ್ಷ ಕೇಸ್: ಕರೊನಾ ವೈರಸ್ ದೈನಿಕ ಪ್ರಕರಣ ಸ್ವಲ್ಪ ಕಡಿಮೆಯಾಗಿದ್ದು ಸೋಮವಾರ 3,66,161 ಹೊಸ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ 3,754 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 2 ಕೋಟಿ 26 ಲಕ್ಷ ದಾಟಿದ್ದು ಮೃತರ ಸಂಖ್ಯೆ 2,46,116 ದಾಟಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿ ಸಹಿತ 10 ರಾಜ್ಯಗಳಲ್ಲಿ ಶೇಕಡ 73ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ.

    *ಸಹಾಯ ಹಸ್ತ*

    ಕರೊನಾ ಕಾಯಿಲೆಯಿಂದ ಮೃತಪಟ್ಟ ತಮ್ಮ ಉದ್ಯೋಗಿಗಳ ಕುಟುಂಬಗಳಿಗೆ ನೆರವಾಗಲು ಅನೇಕ ಕಂಪನಿಗಳು ಮುಂದೆ ಬಂದಿವೆ. ಕುಟುಂಬಗಳಿಗೆ ಆರ್ಥಿಕ ಹಾಗೂ ಆರ್ಥಿಕೇತರ ಸಹಾಯ ನೀಡಲು ಆರಂಭಿಸಿವೆ. ಮೃತ ಉದ್ಯೋಗಿಗಳ ಕುಟುಂಬಗಳ ವೇದನೆಯನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸುವ ದಿಸೆಯಲ್ಲಿ ಅನೇಕ ಕಂಪನಿಗಳು ಏಕ ಕಂತಿನ ಸಹಾನುಭೂತಿ ಹಣಕಾಸು ನೆರವು, ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಪ್ರಾಯೋಜನೆ ಮತ್ತು ಬಾಳ ಸಂಗಾತಿಗೆ (ಪತಿ ಅಥವಾ ಪತ್ನಿ) ಉದ್ಯೋಗ ನೀಡಿಕೆ ಇವೇ ಮುಂತಾದ ನೊಂದವರ ಕಣ್ಣೀರೊರೆಸುವ ಕ್ರಮಗಳನ್ನು ಕೈಗೊಳ್ಳುತ್ತಿವೆ. ಯಾವ್ಯಾವ ಕಂಪನಿಯ ಎಷ್ಟು ನೌಕರರು ಕೋವಿಡ್​ಗೆ ಬಲಿಯಾಗಿದ್ದಾರೆ ಎಂಬುದು ಸ್ಪಷ್ಟವಿಲ್ಲ.

    *ಚೇತರಿಕೆ ಹಾದಿಯಲ್ಲಿ ದೆಹಲಿ*

    ದೆಹಲಿಯಲ್ಲಿ ಕರೊನಾ ಪಾಸಿಟಿವಿಟಿ ದರ ಶೇಕಡ 20 ಕ್ಕಿಂತ ಕೆಳಗೆ ಕುಸಿದಿದೆ. ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳು ಅಧಿಕವಾಗಿದೆ. ಪೂರ್ಣವಾಗಿ ಸುಧಾರಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ. ದೆಹಲಿಯಲ್ಲಿ ಸೋಮವಾರ 12,651 ಹೊಸ ಪ್ರಕರಣಗಳು ಮತ್ತು 319 ಮರಣ ದಾಖಲಾಗಿದೆ. ಇದು ಕಳೆದ ನಾಲ್ಕು ವಾರಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಪಾಸಿಟಿವಿಟಿ ದರ ಶೇ. 19.10ಕ್ಕೆ ಇಳಿದಿದೆ. ಇದು ಏಪ್ರಿಲ್ 16ರ ನಂತರದ ಅತಿ ಕಡಿಮೆ ದರವಾಗಿದೆ ಎಂದು ದೆಹಲಿ ಸರ್ಕಾರದ ಬುಲೆಟಿನ್ ತಿಳಿಸಿದೆ. ಏಪ್ರಿಲ್ 17ರ ನಂತರ ದೆಹಲಿ ಸತತವಾಗಿ ಶೇಕಡ 20ಕ್ಕಿಂತ ಹೆಚ್ಚಿನ ದರ ಹೊಂದಿತ್ತು. ಸೋಮವಾರ 13,306 ಜನರು ಡಿಸ್ಚಾರ್ಜ್ ಆಗಿದ್ದು ಹೊಸ ಕೇಸ್​ಗಿಂತ ಅಧಿಕವಾಗಿದೆ.

    *ಉಚಿತ ಆಹಾರ ಧಾನ್ಯವಿಲ್ಲ*

    ಕಳೆದ ವರ್ಷದಂತೆ ದೇಶವ್ಯಾಪಿ ಸಂಪೂರ್ಣ ಲಾಕ್​ಡೌನ್ ವಿಧಿಸದಿರುವುದರಿಂದ ಹಾಗೂ ಗಾಬರಿಪಡಬೇಕಾದ ಸನ್ನಿವೇಶ ಇಲ್ಲದಿರುವುದರಿಂದ ವಲಸೆ ಕಾರ್ವಿುಕರಿಗೆ ಉಚಿತ ಆಹಾರ ಧಾನ್ಯ ವಿತರಿಸುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಆದರೆ, 80 ಕೋಟಿ ಪಡಿತರ ಚೀಟಿದಾರರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆಎವೈ) ಅಡಿ ಮೇ ಮತ್ತು ಜೂನ್ ತಿಂಗಳಿಗೆ ಹೆಚ್ಚುವರಿಯಾಗಿ ಆಹಾರ ಧಾನ್ಯ ವಿತರಿಸಲು ಆರಂಭಿಸಲಾಗಿದೆ ಎಂದು ಹೇಳಿದೆ.

    *ಜಿಡಿಪಿ ಕುಸಿತ ಸಾಧ್ಯತೆ*

    ಕರೊನಾ 2ನೇ ಅಲೆಯಿಂದಾಗಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರ 2021-22ರಲ್ಲಿ (ಏಪ್ರಿಲ್-ಮಾರ್ಚ್) ಒಂದಂಕಿ ಅಥವಾ 8.2%ಕ್ಕೆ ಕುಸಿಯುತ್ತದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಹೇಳಿದೆ. ಜೂನ್ ಅಂತ್ಯದೊಳಗೆ ಕೋವಿಡ್-19 ಸಾಂಕ್ರಾಮಿಕತೆ ಉತ್ತುಂಗ ತಲುಪಿದರೆ ಬೆಳವಣಿಗೆ ನೀರಸವಾಗಿರುತ್ತದೆ ಎಂದಿದೆ.

    *ಬೆಡ್ ಮಾಹಿತಿಗೆ ಗೂಗಲ್ ಫೀಚರ್*

    ಕರೊನಾ ರೋಗಿಗಳಿಗೆ ಆಯ್ದ ಸ್ಥಳಗಳಲ್ಲಿ ಬೆಡ್ ಲಭ್ಯತೆ ಹಾಗು ಮೆಡಿಕಲ್ ಆಕ್ಸಿಜನ್ ಮಾಹಿತಿ ತಿಳಿಸಲು ಗೂಗಲ್ ಮ್ಯಾಪ್​ನಲ್ಲಿ ಹೊಸ ಫೀಚರ್ ಪರೀಕ್ಷಿಸುತ್ತಿರುವುದಾಗಿ ಗೂಗಲ್ ಸೋಮವಾರ ತಿಳಿಸಿದೆ. ಸಾಂಕ್ರಾಮಿಕತೆ ವಿರುದ್ಧದ ಹೋರಾಟದಲ್ಲಿ ನೆರವಾಗುವ ಪ್ರಯತ್ನದಲ್ಲಿ ಇದೊಂದು ಭಾಗವಾಗಿದೆ ಎಂದು ಸಂಸ್ಥೆ ಹೇಳಿದೆ.

    *ಪ್ರಧಾನಿಗೆ ಸಿಎಂ ವಿಜಯನ್ ಪತ್ರ*

    ಮೆಡಿಕಲ್ ಆಕ್ಸಿಜನ್​ನ ದಾಸ್ತಾನನ್ನು ಈಗಾಗಲೇ ಬೇರೆ ರಾಜ್ಯಗಳಿಗೆ ಪೂರೈಸಲಾಗಿದೆ. ಇನ್ನಷ್ಟು ಆಕ್ಸಿಜನ್ ಸರಬರಾಜು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಈಗ 86 ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರ ದಾಸ್ತಾನಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

    *ಫಂಗಲ್ ಔಷಧ ಕೊರತೆ*
    ಶಿಲೀಂದ್ರ-ವಿರೋಧಿ (ಆಂಟಿ ಫಂಗಲ್) ಇಂಜೆಕ್ಷನ್ ‘ಅಂಫೋಟೆರಿಸಿನ್’ ಮತ್ತಿತರ ಔಷಧಗಳ ಕೊರತೆ ತೀವ್ರ ವಾಗಿದ್ದು ಹೊಸದೊಂದು ತಲೆ ನೋವಿಗೆ ಕಾರಣವಾಗಿದೆ. ಶೇಕಡ 30ರಷ್ಟು ಮಧುಮೇಹಿಗಳಲ್ಲಿ ಕೋವಿಡ್ ನಂತರ ಕಾಡುವ ಕಾಯಿಲೆಗಳ ಚಿಕಿತ್ಸೆಯಲ್ಲಿ ಈ ಔಷಧಗಳನ್ನು ಬಳಸಲಾಗುತ್ತದೆ. ಕೊರತೆ ಜತೆಗೆ ಬೆಲೆಯೂ ದುಬಾರಿಯಾಗಿರುವುದು ಚಿಂತೆಯನ್ನು ಇಮ್ಮಡಿ ಗೊಳಿಸಿದೆ. ದೈನಿಕ 15,000 ರೂಪಾಯಿಯಿಂದ 20,000 ರೂಪಾಯಿವರೆಗೆ ವೆಚ್ಚವಾಗಲಿದ್ದು ಎರಡರಿಂದ ಮೂರು ವಾರ ಇವುಗಳನ್ನು ಬಳಸಬೇಕಾಗುತ್ತದೆ. ಹೀಗಾಗಿ ಕೋವಿಡ್-19 ರೋಗಿಗಳಿಗೆ ಇದು ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ.

    ((ಫೀಚರ್ ಫೋಟೋ ಕ್ಯಾಪ್ಷನ್: ಬಿಹಾರದ ಪಟನಾದಲ್ಲಿ ಕರೊನಾ ಲಸಿಕೆ ಪಡೆಯಲು ಸೋಮವಾರ ಮುಗಿಬಿದ್ದ ಜನರು.))

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts