ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಶಿಕ್ಷಣ ಕೇಂದ್ರವೊಂದರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 100 ಮಕ್ಕಳು ಮೃತಪಟ್ಟಿರುವುದಾಗಿ ಶುಕ್ರವಾರ ವರದಿಯಾಗಿದೆ.
ಘಟನೆಯಲ್ಲಿ ಹತ್ಯೆಗೀಡಾದ ಬಹುತೇಕ ಮಕ್ಕಳು ಹಜಾರಸ್ ಮತ್ತು ಶಿಯಾ ಪಂಗಡಕ್ಕೆ ಸೇರಿದವರೆಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಹಜಾರಸ್, ಆಫ್ಘಾನ್ನ ಮೂರನೇ ಅತಿ ದೊಡ್ಡ ಜನಾಂಗೀಯ ಗುಂಪಾಗಿದೆ. ಕಾಬೂಲ್ ನಗರದ ಪಶ್ಚಿಮ ಭಾಗದಲ್ಲಿರುವ ದಶ್ತ್ ಇ ಬಾರ್ಚಿಯ ಕಾಜ್ ಶಿಕ್ಷಣ ಕೇಂದ್ರದಲ್ಲಿ ಬಾಂಬ್ ಸ್ಫೋಟಿಸಲಾಗಿದೆ.
ಘಟನೆಯ ಬಗ್ಗೆ ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವಾರಿ ಟ್ವೀಟ್ ಮಾಡಿದ್ದು, ಇಲ್ಲಿವರೆಗೆ ನಾವು 100 ವಿದ್ಯಾರ್ಥಿಗಳ ಮೃತದೇಹವನ್ನು ಲೆಕ್ಕ ಹಾಕಿದ್ದೇವೆ. ದಾಳಿಯಲ್ಲಿ ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಯೂನಿವರ್ಸಿಟಿ ಪ್ರವೇಶ ಪರೀಕ್ಷೆಯಾಗಿದ್ದರಿಂದ ತರಗತಿ ತುಂಬಿ ತುಳುಕುತ್ತಿತ್ತು. ಸ್ಫೋಟದ ಪರಿಣಾಮ ಕೈ-ಕಾಲುಗಳು ಹಾಗೂ ದೇಹದ ಭಾಗಗಳು ಛಿದ್ರ ಛಿದ್ರವಾಗಿದ್ದು, ಇಡೀ ಘಟನಾ ಸ್ಥಳ ಭೀಕರವಾಗಿತ್ತು ಎಂದಿದ್ದಾರೆ.
ಬಾಂಬ್ ದಾಳಿಗೂ ಮುನ್ನ ತುಂಬಿದ್ದ ತರಗತಿಯ ವಿಡಿಯೋ ಮತ್ತು ದಾಳಿಯ ನಂತರ ಶಾಲೆಯ ಸ್ಥಿತಿ ಮತ್ತು ವಿದ್ಯಾರ್ಥಿಗಳ ಶವಗಳು ಬಿದ್ದಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದಾಳಿಯ ತೀವ್ರತೆಗೆ ಸಾಕ್ಷಿಯಾಗಿವೆ.
ಪಶ್ಚಿಮ ಕಾಬೂಲ್‌ನ ದಷ್ಟೆ ಬರ್ಚೆ ಏರಿಯಾವು ನಿರಂತರವಾಗಿ ಐಎಸ್ಕೆಪಿ ದಾಳಿಗೆ ಗುರಿಯಾಗುತ್ತಿದೆ. ಬಾಂಬ್ ದಾಳಿ ನಡೆದಾಗ ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಯಾರು ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ವಕ್ತಾರ ಖಾಲಿದ್ ಜರ್ದಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಅಮೆರಿಕ ಕೂಡ ಬಾಂಬ್ ದಾಳಿಯನ್ನು ಖಂಡಿಸಿದೆ. (ಏಜೆನ್ಸೀಸ್)