ನ್ಯೂಸ್

Pushpa-2: ವಿತರಕ ವಿವಾದಾತ್ಮಕ ಹೇಳಿಕೆ.. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವ ಆತಂಕ!

ಬೆಂಗಳೂರು: ‘ಪುಷ್ಪ 2’(Pushpa-2) ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ನಿರ್ಮಾಪಕರು ಇತ್ತೀಚೆಗಷ್ಟೇ ವಿತರಕರೊಂದಿಗೆ ಹೈದರಾಬಾದ್‌ನಲ್ಲಿ ಸಭೆ ಏರ್ಪಡಿಸಿದ್ದರು. ಈ ವೇದಿಕೆಯಲ್ಲಿ ಕನ್ನಡ ವಿತರಕ ಮಾಡಿದ ಕಾಮೆಂಟ್ ಈಗ ಕರ್ನಾಟಕದಲ್ಲಿ ವಿವಾದವಾಗಿದೆ.

ಕೆಜಿಎಫ್ ಮತ್ತು ಕಾಂತಾರ ಚಿತ್ರಗಳ ದಾಖಲೆಗಳನ್ನು ಮುರಿಯುವ ನಿಟ್ಟಿನಲ್ಲಿ ಪುಷ್ಪ 2 ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಗರಿಷ್ಠ ಪ್ರದರ್ಶನಗಳನ್ನು ಯೋಜಿಸಲಾಗುವುದು ಎಂದು ವಿತರಕ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದ್ದರು.

ವಿತರಕರ ಈ ಮಾತುಗಳು ಕನ್ನಡಿಗರನ್ನು ಕೆರಳಿಸುವಂತಿದ್ದು, ಕನ್ನಡ ಅಭಿಮಾನಿಗಳು ತಮ್ಮ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಕೇವಲವಾಗಿ ಕಂಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಅನ್ಯಭಾಷೆ ಚಿತ್ರಗಳ ಪ್ರಾಬಲ್ಯದ ಬಗ್ಗೆ ಹಿಂದಿನಿಂದಲೂ ಕನ್ನಡಿಗರು ಮತ್ತು ಚಿತ್ರರಂಗ ಅಸಹನೆ ತೋರಿಸುತ್ತ ಬಂದಿದೆ. ತೆಲುಗು ಚಿತ್ರಗಳಾದ ಬಾಹುಬಲಿ, ಆರ್‌ಆರ್‌ಆರ್ ಮತ್ತು ಸಲಾರ್ ನಂತಹ ಚಿತ್ರಗಳು ಬಿಡುಗಡೆಯಾದಾಗ ಹೆಚ್ಚಿನ ಸ್ಕ್ರೀನ್‌ಗಳನ್ನು ನೀಡಿ ಕನ್ನಡ ಚಿತ್ರಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಧ್ವನಿ ಎದ್ದಿತ್ತು.

ಇನ್ನು ದಶಕಳಿಂದಲೂ ಡಬ್ಬಿಂಗ್ ಸಿನಿಮಾಗಳ ಬಿಡುಗಡೆಗೆ ತಡೆಯೊಡ್ಡುತ್ತಲೇ ಬಂದಿದ್ದರೂ, ಅನ್ಯಭಾಷೆಯ ಚಿತ್ರಗಳನ್ನು ಬಿಡುಗಡೆ ಎಗ್ಗಿಲ್ಲದೆ ನಡೆಯುತ್ತಿದೆ. ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಕಾಲದಲ್ಲಿ ಬೇರೆ ಭಾಷೆಯ ಚಿತ್ರಗಳ ಬಿಡುಗಡೆಯನ್ನು ನಿಲ್ಲಿಸಲಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಆ ನಿಯಮಗಳನ್ನು ತೆಗೆದುಹಾಕಲಾಗಿದ್ದು, ಮತ್ತೆ ಕನ್ನಡಿಗರು ಪರಭಾಷಿಕರ ಇಂತಹ ದೌರ್ಜನ್ಯಗಳ ವಿರುದ್ಧ ಸೆಟೆದು ನಿಲ್ಲಬೇಕಿದೆ ಎಂದು ಕನ್ನಡಪರ ಸಂಘಟನೆಗಳೂ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ತೆಲುಗು ಮತ್ತು ತಮಿಳು ಡಬ್ಬಿಂಗ್​ ಚಿತ್ರಗಳು ಕನ್ನಡ ಚಿತ್ರಗಳಿಗಿಂತ ಹೆಚ್ಚಿನ ಪ್ರದರ್ಶನಗಳನ್ನು ಕಾಣುತ್ತಿವೆ. ಅದೇ ರೀತಿ ಪುಷ್ಪಾ 2 ರ ಕನ್ನಡ ವಿತರಕ ಲಕ್ಷ್ಮೀಕಾಂತ್ ರೆಡ್ಡಿ ಹೇಳಿಕೆ ಕನ್ನಡಿಗರನ್ನು ಕೆರಳಿಸುವಂತಿದೆ. ಇನ್ನು ಡಿಸೆಂಬರ್ ಮೊದಲ ವಾರದಲ್ಲಿ, ಪುಷ್ಪ 2 ಹೊರತುಪಡಿಸಿ, ಯಾವುದೇ ಗಮನಾರ್ಹ ಕನ್ನಡ ಚಲನಚಿತ್ರಗಳು ಬಿಡುಗಡೆಯಾಗುತ್ತಿಲ್ಲವಾದರೂ ಕನ್ನಡ ಚಿತ್ರಗಳನ್ನು ಮೀರಿಸುತ್ತದೆ ಎಂಬ ಅತಿರೇಕದ ಮಾತುಗಳು ಸಂಚಲನಕ್ಕೆ ಕಾರಣವಾಗಿದೆ. ಪುಷ್ಪ-2 ಮೇಲೆ ಕನ್ನಡಿಗರ ಸಿಟ್ಟು ಯಾವ ಪರಿಣಾಮ ಬೀರುತ್ತೆ ಎಂಬುದನ್ನು ಕಾದುನೋಡಬೇಕಿದೆ.