ನ್ಯೂಸ್

ಯುವ ರೈತನ ಸಾವು! 1 ಕೋಟಿ ರೂ. ಪರಿಹಾರ, ಕುಟುಂಬದವರಿಗೆ ಸರ್ಕಾರಿ ಉದ್ಯೋಗ: ಪಂಜಾಬ್ ಸಿಎಂ ಘೋಷಣೆ

ಚಂಡೀಗಢ: ಖಾನೌರಿ ಗಡಿಯಲ್ಲಿ ಬುಧವಾರ (ಫೆ.21) ನಡೆದ ರೈತರ ಪ್ರತಿಭಟನೆ ವೇಳೆ ಮೃತಪಟ್ಟ ಯುವರೈತ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ ಇಂದು ಸರ್ಕಾರಿ ಉದ್ಯೋಗ ಮತ್ತು 1 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.

ಪ್ರತಿಭಟನೆ ವೇಳೆ ಮೃತಪಟ್ಟ ರೈತನ ಸಾವಿನ ಕುರಿತು ತನಿಖೆ ನಡೆಯಲಿದೆ. ತದನಂತರ ಪೊಲೀಸರು ಎಫ್​ಐಆರ್ ದಾಖಲಿಸಿಕೊಳ್ಳಲಿದ್ದಾರೆ ಎಂದು ಸಿಎಂ ಮನ್​ ತಿಳಿಸಿದರು. ಯುವ ರೈತನ ಸಾವಿಗೆ ಕಾರಣರಾದವರ ವಿರುದ್ಧ ತನಿಖೆಯ ನಂತರ ಎಫ್‌ಐಆರ್ ದಾಖಲಿಸಲಾಗುವುದು, ಅವರಿಗೆ ಮಾದರಿ ಶಿಕ್ಷೆಯನ್ನು ಖಚಿತಪಡಿಸಲಾಗುವುದು ಎಂದರು.

ರಾಜ್ಯ ಸರ್ಕಾರವು ರೈತರಿಗೆ ಸಂಪೂರ್ಣ ಬೆಂಬಲ ನೀಡಿದೆ. ತಮ್ಮ ನಿಜವಾದ ಬೇಡಿಕೆಗಳ ಹಿನ್ನೆಲೆಯಲ್ಲಿ ಶಾಂತಿಯುತ ಪ್ರತಿಭಟನೆಗಾಗಿ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದಾರೆ ಎಂದು ಸಿಎಂ ಹೇಳಿದರು. ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲದ ಕಾರಣ ಅಥವಾ ಮರಣೋತ್ತರ ಪರೀಕ್ಷೆಯನ್ನು ಮಾಡದ ಕಾರಣ, ಶುಭಕರನ್ ಅವರ ದೇಹವನ್ನು ಇನ್ನೂ ಪಟಿಯಾಲಾದ ರಾಜೇಂದ್ರ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ರೈತ ಮುಖಂಡರು ಮತ್ತು ಶುಭಕರನ್​ ಕುಟುಂಬವು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಯುವ ರೈತನಿಗೆ ಗುಂಡು ಹಾರಿಸಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಮೊದಲನೆಯದಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ತಾಂತ್ರಿಕವಾಗಿ, ಪೊಲೀಸರು ಮತ್ತು ವೈದ್ಯರು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಕುಟುಂಬದ ಯಾರಾದರೂ ಒಬ್ಬ ವ್ಯಕ್ತಿಯ ಸಹಿ ಪಡೆಯಬೇಕು. ಆದ್ರೆ, ಕುಟುಂಬಸ್ಥರು ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ.

ನೊಂದ ಕುಟುಂಬವನ್ನು ಭೇಟಿ ಮಾಡಿದ ಜಗ್ಜಿತ್ ಸಿಂಗ್ ದಲ್ಲೆವಾಲ್, ಸರ್ವಾನ್ ಸಿಂಗ್ ಪಂಧೇರ್ ಸೇರಿದಂತೆ ರೈತ ಮುಖಂಡರು ಹರಿಯಾಣ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).