ಯಕ್ಷಗಾನ ಕಲೆಗೆ ಅಂತಃಸತ್ವವಿದೆ ಯಕ್ಷೋತ್ಸವ ಉದ್ಘಾಟಿಸಿ ವಕೀಲ ಮಹೇಶ್ ಕಜೆ ಅಭಿಮತ

mng--22 Feb SDM law
Published on

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಕಳೆದ 32 ವರ್ಷಗಳಿಂದ ಯಕ್ಷೋತ್ಸವ ಮುಂದುವರಿದುಕೊಂಡು ಬರಲು ಯಕ್ಷಗಾನ ಕಲೆಗಿರುವ ಅಂತಃಸತ್ವ ಕಾರಣ ಎಂದು ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ವಕೀಲ ಮಹೇಶ್ ಕಜೆ ಹೇಳಿದರು.


ಎಸ್‌ಡಿಎಂ ಕಾನೂನು ಕಾಲೇಜಿನ ವತಿಯಿಂದ ಕಾಲೇಜು ಆವರಣದಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ- 2024’ ಉದ್ಘಾಟಿಸಿ, ಅವರು ಮಾತನಾಡಿದರು.


ಈ ಕಾಲೇಜಿನಲ್ಲಿ ಓದುತ್ತಿದ್ದಾಗ ಸಮಾನ ಮನಸ್ಕ ಸ್ನೇಹಿತರು ಆರಂಭ ಮಾಡಿದ ಯಕ್ಷೋತ್ಸವ ನಿರಂತರವಾಗಿ ಮುನ್ನಡೆದು ಪ್ರಸ್ತುತ ಯಕ್ಷೋತ್ಸವಕ್ಕೆ ತಾರಾ ಮೌಲ್ಯ ಬಂದಿದೆ. ಕರಾವಳಿಯ ಮಣ್ಣಿನ ಶ್ರೀಮಂತ, ಪರಿಪೂರ್ಣ ಗಂಡು ಕಲೆಯಾಗಿದೆ. ಯಶಸ್ವಿಯಾಗಿ ಮುನ್ನಡೆದು ಶತಮಾನ ಪೂರೈಸಲಿ ಎಂದು ಆಶಿಸಿದರು.


ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ದೇವರಾಜ್ ಕೆ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಪ್ರಥಮ ಯಕ್ಷೋತ್ಸವ ಆಯೋಜನಾ ಸಮಿತಿಯ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಮೊದಲಾದವರಿದ್ದರು.
ಪ್ರಾಧ್ಯಾಪಕರಾಗಿ, ಯಕ್ಷೋತ್ಸವ ಸಂಚಾಲಕರಾಗಿದ್ದು ಪ್ರಸ್ತುತ ನಿವೃತ್ತರಾಗಿರುವ ಪ್ರೊ.ನರೇಶ್ ಮಲ್ಲಿಗೆಮಾಡು, ಅವರ ಪತ್ನಿ ವಿನೋದ ಅವರನ್ನು ಹಾಗೂ ಭಡ್ತಿ ಹೊಂದಿದ ರಂಜಿತ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.


ಯಕ್ಷೋತ್ಸವ ಸಂಚಾಲಕ ಪ್ರೊ.ಪುಷ್ಪರಾಜ್ ಕೆ. ಪ್ರಸ್ತಾವನೆಗೈದರು. ಸಹಾಯಕ ಪ್ರಾಧ್ಯಾಪಕಿ ಡಾ.ಚಂದ್ರಲೇಖ ಸ್ವಾಗತಿಸಿದರು. ಯಕ್ಷೋತ್ಸವದ ಕಾರ್ಯನಿರ್ವಾಹಕ ಕಾರ್ಯದರ್ಶಿ ದಿಶಾ ವಂದಿಸಿದರು. ವಿದ್ಯಾರ್ಥಿನಿ ಪ್ರಮಯ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net