ರಾಜ್ಯದ ರಾಜಧಾನಿಯಲ್ಲಿ ನಡೆದಿರುವ ಆದಾಯ ತೆರಿಗೆ (ಐಟಿ) ದಾಳಿಗಳಲ್ಲಿ ಇಬ್ಬರು ಗುತ್ತಿಗೆದಾರರು ಬಲೆಗೆ ಬಿದ್ದಿದ್ದು, ಅಂದಾಜು 90 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಗಳ ವಿವರಗಳನ್ನು ಗಮನಿಸಿದರೆ ಗುತ್ತಿಗೆದಾರರು- ಜನಪ್ರತಿನಿಧಿಗಳ ನಡುವೆ ನಂಟು ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ.
ಅಚ್ಚರಿಯ ಸಂಗತಿ ಎಂದರೆ, ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇಕಡಾ 40ರಷ್ಟು ಕಮೀಷನ್ ಪಡೆದ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಪದಾಧಿಕಾರಿಯೊಬ್ಬರಿಂದ 42 ಕೋಟಿ ರೂಪಾಯಿಗಳನ್ನು ಪ್ರಸ್ತುತ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಮುನಿರತ್ನ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಇದೇ ವ್ಯಕ್ತಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು ಎಂಬುದು ಗಮನಾರ್ಹ.
ಈ ದಾಳಿಗಳ ಕುರಿತಂತೆ ಆಡಳಿತ ಹಾಗೂ ವಿರೋಧಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿರುವುದನ್ನು ನೋಡಿದರೆ, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ನಡುವೆ ನಂಟು ಎಷ್ಟೊಂದು ಗಾಢವಾಗಿದೆ ಎಂಬುದು ತಿಳಿದುಬರುತ್ತದೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಇದು ರಾಜಕೀಯ ಪ್ರೇರಿತ ದಾಳಿ’ ಎಂದು ಟೀಕಿಸಿದ್ದಾರೆ. ನಗದು ಪತ್ತೆಯಾಗಿದ್ದನ್ನು ನೋಡಿದರೆ, ಐದು ರಾಜ್ಯಗಳ ಚುನಾವಣೆಗಳಿಗೆ ನಿಧಿ ಸಂಗ್ರಹಿಸುವುದಕ್ಕಾಗಿ ಗುತ್ತಿಗೆದಾರರಿಂದ ಪೂರ್ವಭಾವಿಯಾಗಿ ಪಡೆಯುತ್ತಿರುವ ಕಮಿಷನ್ ಇದಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿವೆ. ಪ್ರಸ್ತುತ ಬೆಳವಣಿಗೆಗಳು ಕೂಡ ಇದಕ್ಕೆ ಪುಷ್ಟಿ ಕೊಡುವಂತಿವೆ. ಏಕೆಂದರೆ, 40 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾದ ಒಬ್ಬ ಗುತ್ತಿಗೆದಾರ ಕಳೆದ 10 ವರ್ಷದಿಂದ ಯಾವುದೇ ಗುತ್ತಿಗೆ ಕಾಮಗಾರಿ ಕೈಗೊಂಡಿಲ್ಲ ಹಾಗೂ ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಯನ್ನೂ ಆತ ನಡೆಸುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಹಾಗಿದ್ದರೆ, ನಿಜವಾಗಿಯೂ ಈ ಹಣ ಯಾರಿಗೆ ಸೇರಿದ್ದು ಎಂಬುದನ್ನು ತನಿಖೆ ಮಾಡುವ ಅಗತ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆ ಕಾಮಗಾರಿಗಳಿಗೆ ಬಿಲ್ ಪಾವತಿಸುವುದಕ್ಕೆ ಪಡೆದಿರುವ ಕಮಿಷನ್ ಹಣ ಇದಾಗಿರಬಹುದು ಎಂಬ ಅನುಮಾನಗಳಿದ್ದು ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವ ಅಗತ್ಯವಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಹಿಂದಿನ ರಾಜ್ಯ ಸರ್ಕಾರದ ವಿರುದ್ಧ ಶೇಕಡಾ 40ರಷ್ಟು ಕಮಿಷನ್ ಪಡೆಯುವ ಗಂಭೀರ ಆರೋಪವನ್ನು ಮಾಡಿದ್ದರು. ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಇದನ್ನು ದಾಳವಾಗಿ ಬಳಸಿಕೊಂಡಿತು. ಅಲ್ಲದೆ, ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅವಧಿಯಲ್ಲಿ ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್ ಪಡೆದ ಕುರಿತು ನ್ಯಾಯಾಂಗ ತನಿಖೆಗೂ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ. ಹಾಗಿದ್ದರೆ, ಈಗ ಗುತ್ತಿಗೆದಾರರ ಬಳಿ ದೊರೆತಿರುವ ಅಪಾರ ಪ್ರಮಾಣದ ಹಣದ ಬಗೆಗೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವ ನೈತಿಕ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಭಾರತದಲ್ಲಿ ಕ್ರಿಮಿನಲ್ ಅಪರಾಧಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆಯಾಗುತ್ತದೆ. ಆದರೆ, ಆರ್ಥಿಕ ಅಪರಾಧ ಎಸಗುವವರಿಗೆ ಶಿಕ್ಷೆಯಾಗುವುದು ವಿರಳ. ಪ್ರಸ್ತುತ ಪ್ರಕರಣವೂ ಇದೇ ಹಾದಿಯಲ್ಲಿ ಸಾಗುವಂತಾಗಬಾರದು. ದೊಡ್ಡ ಪ್ರಮಾಣದಲ್ಲಿ ನಗದು ವಶಪಡಿಸಿಕೊಂಡಿರುವುದರಿಂದ ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆಯನ್ನು ಸಹಜವಾಗಿ ಆರಂಭಿಸಿದೆ. ಕೇಂದ್ರ ಸರ್ಕಾರವಾದರೂ ಈ ಪ್ರಕರಣಗಳನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.