

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಂಗ್ರಹಣೀಯ ಶಿಲ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಈ ಕಾರ್ಯಕ್ರಮ ನಡೆಯಿತು.
ಅಪ್ಪು ಪತ್ನಿ ಅಶ್ವಿನಿ, ಪುತ್ರಿ ಹಾಗೂ ಡಾ.ರಾಜ್ ಕುಟುಂಬದ ಸದಸ್ಯರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪುನೀತ್ ರಾಜ್ಕುಮಾರ್ ಅವರ ಸಂಗ್ರಹಣೀಯ ಶಿಲ್ಪವನ್ನು ಅನಾವರಣಗೊಳಿಸಿದರು.
ಪುನೀತ್ ರಾಜಕುಮಾರ್ ಅವರು ಅವರ ತಂದೆಗಿಂತಲೂ ಜನಪ್ರಿಯರಾಗಿದ್ದರು. ಅವರು ಇಂದು ಬದುಕಿದ್ದಿದ್ದರೆ ಇನ್ನೂ ಹೆಚ್ಚು ಒಳ್ಳೆಯ ಕೆಲಸಗಳನ್ನು ಮಾಡಿರುತ್ತಿದ್ದರು. ಅವರು ವಿಧಿವಶರಾದಾಗ ಇಡೀ ದೇಶವೇ ಕಣ್ಣೀರು ಹಾಕಿತ್ತು ಎಂದ ಸಿದ್ದರಾಮಯ್ಯ, ಅವರು ನಮ್ಮನ್ನು ಬಹಳ ಬೇಗ ಬಿಟ್ಟು ಹೋದರು ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಡಾ.ರಾಜ್ ಕುಟುಂಬದ ಇತರ ಸದಸ್ಯರು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.