More

    ಕುಟುಂಬಕ್ಕೆ ಸೀಮಿತ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:ಅರುಣ್ ಟೀಕೆ

    ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ ಆ ಪಕ್ಷದ ಕಾರ್ಯಕರ್ತರ ಬಗ್ಗೆ ಕರುಣೆ ಉಂಟಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ವ್ಯಂಗ್ಯವಾಡಿದ್ದಾರೆ.

    ಸಚಿವರ ಮಕ್ಕಳು, ಪತ್ನಿ, ಪ್ರಭಾವಿ ರಾಜಕಾರಣಿಯ ಅಳಿಯ ಹೀಗೆ ಅಭ್ಯರ್ಥಿಗಳ ಪಟ್ಟಿ ಸಂಪೂರ್ಣ ಕುಟುಂಬಕ್ಕೆ ಸೀಮಿತವಾಗಿದೆ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಆ ಪಕ್ಷದ ನಾಯಕರು ಪರಿಗಣಿಸಿಯೇ ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಇನ್ನೊಂದೆಡೆ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಸರ್ಕಾರ ರಚನೆಯಾಗಿ 11 ತಿಂಗಳು ಕಳೆದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಇದು ಹಿಂದು ವಿರೋಧಿ, ಅಭಿವೃದ್ಧಿ ವಿರೋಧಿ, ರೈತ ಹಾಗೂ ಹಿಂದುಳಿದವರ ವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದರು.
    ಗ್ಯಾರಂಟಿ ಯೋಜನೆಗಳನ್ನು ಪದೇಪದೆ ಉಲ್ಲೇಖಿಸುತ್ತ ಅದರ ಅಲೆಯಲ್ಲೇ ಸರ್ಕಾರ ತೇಲುತ್ತಿದೆ. ಇದೇ ಅಲೆಯ ಮೇಲೆ ಲೋಕಸಭೆ ಚುನಾವಣೆ ಎದುರಿಸಲು ಆ ಪಕ್ಷದ ನಾಯಕರು ಸಿದ್ಧರಾಗಿದ್ದಾರೆ. ಒಂದು ಸರ್ಕಾರ ಪಡೆಯಬಹುದಾದ ಗರಿಷ್ಠ ಸಾಲವನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ರಾಜ್ಯದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಅಯೋಧ್ಯೆ ರಾಮಮಂದಿರ ವಿಚಾರ, ಮುಜರಾಯಿ ದೇವಾಲಯಗಳ ಹುಂಡಿ ಹಣದ ವಿಷಯದಲ್ಲಿ ಸರ್ಕಾರ ತನ್ನ ಹಿಂದು ವಿರೋಧಿ ನೀತಿಯನ್ನು ಜಗಜ್ಜಾಹಿರುಗೊಳಿಸಿದೆ. ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು ಬ್ರದರ್ಸ್‌ ಎನ್ನುವ ಮಟ್ಟಿಗೆ ಕಾಂಗ್ರೆಸ್ ನಾಯಕರ ಅಲ್ಪಸಂಖ್ಯಾತರ ಓಲೈಕೆ ಹೆಚ್ಚಿದೆ. ದಲಿತರ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ 53 ಸಾವಿರ ಕೋಟಿ ರೂ. ಹಣವನ್ನು ಅನ್ಯಯೋಜನೆಗಳಿಗೆ ಬಳಸಿ ದಲಿತ ವಿರೋಧಿ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ, ಪ್ರಮುಖರಾದ ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts