ನವದೆಹಲಿ: ಕೆಲಸದ ಒತ್ತಡದಿಂದಾಗಿ (Work Pressure) ಕೆಲ ದಿನಗಳ ಹಿಂದೆ ಮೃತಪಟ್ಟ ಯುವತಿ ಅನಾ ಸೆಬಾಸ್ಟಿಯನ್ ಪೆರಾಯಿಲ್ (26) ಸಾವಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಕಾರ್ಮಿಕ ಇಲಾಖೆ ತನಿಖೆಗೆ ಆದೇಶಿಸಿತ್ತು. ಇತ್ತ ತನಿಖೆ ವೇಳೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಈ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.
ಯುವತಿ ಅನಾ ಕೆಲಸ ಮಾಡುತ್ತಿದ್ದ ಅರ್ನ್‌ಸ್ಟ್ ಆ್ಯಂಡ್ ಯಂಗ್ (EY) ಕಂಪನಿಯು ಕಾರ್ಮಿಕ ಕಲ್ಯಾಣ ಪರವಾನಗಿ ಹೊಂದಿರಲಿಲ್ಲ ಎಂದು ವರದಿಯಾಗಿದ್ದು, ಮತ್ತಷ್ಟು ಆಕ್ರೋಶಕ್ಕೆ ಗುರಿಯಾಗಿದೆ. 2007ರಿಂದ ಈ ಕಂಪನಿ ಅಸ್ತಿತ್ವದಲ್ಲಿದೆ. ಕಳೆದ 17 ವರ್ಷಗಳಿಂದ ಕಾರ್ಮಿಕ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
2024ರ ಫೆಬ್ರವರಿ ತಿಂಗಳಲ್ಲಿ ಕಂಪನಿಯು ಕಾರ್ಮಿಕ ಕಲ್ಯಾಣ ಪರವಾನಗಿಗೆ ಅರ್ಜಿ ಸಲ್ಲಿಸಿದ್ದು, ಇಲಾಖೆ ಅದನ್ನು ತಿರಸ್ಕರಿಸಿದೆ. 2007ರಲ್ಲಿ ಕಂಪನಿ ಪ್ರಾರಂಭಿಸಿದರೂ ಈಗ ಅರ್ಜಿ ಹಾಕಿರುವ ವಿಚಾರವನ್ನು ಉಲ್ಲೇಖಿಸಿ ತಿರಸ್ಕರಿಸಲಾಯಿತು. ಇಷ್ಟು ಲೇಟಾಗಿ ಅರ್ಜಿ ಸಲ್ಲಿಸಕು ಕಾರಣವನ್ನು ಕೇಳಲಾಗಿದ್ದು, ಏಳು ದಿನದೊಳಗಾಗಿ ಉತ್ತರಿಸಲಿಲ್ಲವೆಂದರೆ 5 ಲಕ್ಷ ರೂಪಾಯಿ ದಂಡ ಹಾಗೂ ಆರು ತಿಂಗಳ ಸಜೆ ವಿಧಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲಸಕ್ಕೆ ಸೇರಿದ ನಾಲ್ಕು ತಿಂಗಳಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಅಧಿಕ ಒತ್ತಡವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನಾ ಸೆಬಾಸ್ಟಿಯನ್ ಪೆರಾಯಿಲ್ (26) ಎಂಬ ಯುವತಿಯ ಸಾವು ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದ್ದು, ನನ್ನ ಮಗಳಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಹೀಗಾಗಿ ಅವಳು ಮೃತಪಟ್ಟಿದ್ದಾಳೆಂದು ಆಕೆಯ ತಾಯಿ ಆರೋಪಿಸಿದ್ದು, ಕಂಪನಿಯವರನ್ನು ಉದ್ಧೇಶಿಸಿ ಬರೆದಿರುವ ಮನಕಲುಕುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.