ನ್ಯೂಸ್

ಸಾರ್ವಜನಿಕ ಹಿತಾಸಕ್ತಿ ಮುಖ್ಯ: ನಿಯಂತ್ರಣ ಕ್ರಮಕ್ಕೆ ಕೇಂದ್ರದ ಚಿಂತನೆ

Webdesk - Ravikanth

ಅಂತರ್ಜಾಲ ಲಭ್ಯತೆ ಹಾಗೂ ಮೊಬೈಲ್ ಬಳಕೆ ಹೆಚ್ಚಿದ ಮೇಲೆ ಜಾಗತಿಕವಾಗಿ ವ್ಯಾಪಕ ಬದಲಾವಣೆ ಆಗಿರುವುದನ್ನು ಕಾಣುತ್ತಲೇ ಇದ್ದೇವೆ. ಈ ಸಾಧನಗಳು ಜನರ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಆಯಾಮಗಳಲ್ಲಿ ವೇಗೋತ್ಕರ್ಷ ತಂದಿರುವುದೂ ನಿಜ. ಅದೇ ಕಾಲಕ್ಕೆ ಇವುಗಳಿಂದ ಆಗುತ್ತಿರುವ ಅಡ್ಡಪರಿಣಾಮಗಳು ಸಹ ತೀವ್ರವಾಗಿ ಅನುಭವಕ್ಕೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇ-ಫಾರ್ಮಸಿ ಮತ್ತು ಮೊಬೈಲ್ ಸ್ಮಾರ್ಟ್​ಫೋನ್ ವಿಷಯಗಳಲ್ಲಿ ಈಗ ತರಲು ಚಿಂತಿಸಿರುವ ಎರಡು ಕ್ರಮಗಳು ಗಮನಾರ್ಹವಾಗಿ ಗೋಚರಿಸುತ್ತವೆ.

ಆನ್​ಲೈನ್ ಮೂಲಕ ಔಷಧಗಳನ್ನು ಸರಬರಾಜು ಮಾಡುವ ಇ-ಫಾರ್ಮಸಿಗಳ ಮೇಲೆ ಕೆಲ ನಿಯಂತ್ರಣ ವಿಧಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎಂಬುದಾಗಿ ವರದಿಯಾಗಿದೆ. ದತ್ತಾಂಶ ದುರುಪಯೋಗ ಇತ್ಯಾದಿ ಆರೋಪದ ಮೇಲೆ 20ಕ್ಕೂ ಹೆಚ್ಚು ಇ-ಫಾರ್ಮಸಿಗಳಿಗೆ ಭಾರತದ ಔಷಧಗಳ ಮಹಾನಿಯಂತ್ರಕರು (ಡಿಜಿಸಿಐ) ಕೆಲ ದಿನಗಳ ಹಿಂದೆ ನೋಟಿಸ್ ಜಾರಿಮಾಡಿದ್ದರು. ಇದು ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಗಂಭೀರವಾಗಿ ಆಲೋಚಿಸಬೇಕಾದ್ದು ಅನಿವಾರ್ಯ. ಅದರಲ್ಲೂ ನೋಂದಾಯಿತ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಲ ಇ-ಫಾರ್ಮಸಿಗಳು ಚಿಲ್ಲರೆ ಔಷಧ ಮಾರಾಟ ಮಾಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪರವಾನಗಿ ಸೇರಿದಂತೆ ಕೆಲ ನಿಯಮಗಳನ್ನು ತರಲು ಸರ್ಕಾರ ಮುಂದಾಗಿದೆ.

ಇದಲ್ಲದೆ, ಆರೋಗ್ಯಕ್ಕೆ ಸಂಬಂಧಿಸಿದ ಸಚಿವರ ಗುಂಪು (ಜಿಒಎಂ) ಸಹ ಆನ್​ಲೈನ್ ಫಾರ್ಮಸಿ ಪರವಾಗಿಲ್ಲ. ಇನ್ನು, ಸ್ಮಾರ್ಟ್​ಫೋನ್​ಗಳಲ್ಲಿನ ಪೂರ್ವ ಸಂಸ್ಥಾಪಿತ (ಪ್ರೀ-ಇನ್​ಸ್ಟಾಲ್ಡ್) ಆಪ್​ಗಳು ಭದ್ರತೆ ದೃಷ್ಟಿಯಿಂದ ಅಪಾಯಕಾರಿಯಾಗುವ ಸಾಧ್ಯತೆಯ ಚರ್ಚೆ ಬಹಳ ದಿನಗಳಿಂದ ಇದೆ. ಈ ಆಪ್​ಗಳನ್ನು ತೆಗೆದುಹಾಕುವ ಹಾಗೂ ಪ್ರಮುಖ ಆಪರೇಟಿಂಗ್ ಸಿಸ್ಟಂ (ಒಎಸ್) ಅಪ್​ಡೇಟ್​ಗಳನ್ನು ಪ್ರದರ್ಶಿಸಲು ಅವಕಾಶ ನೀಡುವಂತೆ ಸ್ಮಾರ್ಟ್​ಫೋನ್ ತಯಾರಕರಿಗೆ ಸೂಚಿಸಲು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ (ಐಟಿ) ಚಿಂತನೆ ನಡೆಸುತ್ತಿದೆ. ಚೀನಾ ಕಂಪನಿಗಳು ಮೊಬೈಲ್ ದತ್ತಾಂಶಗಳನ್ನು ಬೇಹುಗಾರಿಕೆಗೆ ಬಳಸುವ ಬಗ್ಗೆ ಭಾರತ ಮಾತ್ರವಲ್ಲ ಇತರ ಅನೇಕ ದೇಶಗಳು ಸಹ ಅನುಮಾನ ವ್ಯಕ್ತಪಡಿಸಿವೆ. ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪ್ರಾಬಲ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಕೇಂದ್ರ ಸರ್ಕಾರ 2020ರಿಂದ ಚೀನಾ ಕಂಪನಿಗಳ ವ್ಯವಹಾರದ ಮೇಲೆ ನಿಗಾ ಇರಿಸಿದ್ದು, ಟಿಕ್​ಟಾಕ್ ಸಹಿತ 300ಕ್ಕೂ ಹೆಚ್ಚು ಚೀನಿ ಆಪ್​ಗಳನ್ನು ನಿಷೇಧಿಸಿದೆ.

ಪ್ರಸ್ತುತ ಬಹುತೇಕ ಸ್ಮಾರ್ಟ್​ಫೋನ್​ಗಳು ಡಿಲೀಟ್ ಮಾಡಲಾಗದ ಪ್ರೀ-ಇನ್​ಸ್ಟಾಲ್ಡ್ ಆಪ್​ಗಳೊಂದಿಗೆ ಬರುತ್ತಿವೆ. ಹೊಸ ನಿಯಮಗಳ ಪ್ರಕಾರ ಸ್ಮಾರ್ಟ್​ಫೋನ್ ತಯಾರಕರು ಅನ್​ಇನ್​ಸ್ಟಾಲ್ ಆಯ್ಕೆಯನ್ನು ಕೊಡಬೇಕಾಗುತ್ತದೆ. ಈ ನಿಯಮ ಪಾಲನೆ ಬಗ್ಗೆ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನೇಮಿಸಿದ ಪ್ರಯೋಗಾಲಯವೊಂದು ಗಮನ ವಹಿಸುತ್ತದೆ. ‘ಭಾರತದಲ್ಲಿ ಬಳಸಲಾಗುತ್ತಿರುವ ಪ್ರಮುಖ ಸ್ಮಾರ್ಟ್​ಫೋನ್​ಗಳಲ್ಲಿ ಪ್ರೀ-ಇನ್​ಸ್ಟಾಲ್ಡ್ ಆಪ್/ಬ್ಲೋಟ್​ವೇರ್​ಗಳಿದ್ದು ಗೋಪ್ಯತೆ/ಮಾಹಿತಿ ಭದ್ರತೆ ಕುರಿತ ಗಂಭೀರ ಸಮಸ್ಯೆಗಳನ್ನು ಒಡ್ಡುತ್ತವೆ’ ಎಂದು ಐಟಿ ಸಚಿವಾಲಯದ ಸಭೆಯೊಂದರಲ್ಲಿ ಮಂಡಿಸಲಾದ ಗೋಪ್ಯ ದಾಖಲೆಯಲ್ಲಿ ಹೇಳಲಾಗಿದೆ. ಜಾಗತಿಕ ಭೂ-ಸಾಮರಿಕ ವಾತಾವರಣ ಹಾಗೂ ಅಂತರ್ಜಾಲ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಮತ್ತು ಆಂತರಿಕ ಸುರಕ್ಷತೆ ಬಗ್ಗೆ ದೇಶಗಳು ಕಾಳಜಿ ವಹಿಸುವುದು ಅನಿವಾರ್ಯ ಅಗತ್ಯ.