ನ್ಯೂಸ್

ಪಬ್​ಜಿ ಪ್ರೇಮಿಗಳಿಗೆ ಶುಭಸುದ್ದಿ; ಮತ್ತೆ ಬರಲಿದೆ ನಿಮ್ಮ ಫೇವರೆಟ್​ ಗೇಮ್​

Mandara

ನವದೆಹಲಿ: ನೀವು ಪಬ್​ಜಿ ಪ್ರೇಮಿಗಳಾಗಿದ್ದು, ಪಬ್​ಜಿ ನಿಷೇಧವಾದಾಗಿನಿಂದ ಚಿಂತೆಯಲ್ಲಿದ್ದರೆ ಈಗ ಚಿಂತೆ ಬಿಟ್ಟುಬಿಡಿ. ಏಕೆಂದರೆ ಈಗ ಭಾರತೀಯರಿಗಾಗಿ ಹೊಸ ರೂಪದಲ್ಲಿ ಬರಲು ಪಬ್​ಜಿ ಸಿದ್ಧವಾಗಿದೆ.

ಭಾರತೀಯರಿಗಾಗಿ 'ಪಬ್​ಜಿ ಮೊಬೈಲ್​ ಇಂಡಿಯಾ' ಗೇಮಿಂಗ್​ ಆ್ಯಪ್​ ತಯಾರಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಭಾರತದ ಮಾರುಕಟ್ಟೆಗೆ ಬರಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಇನ್ನು ಕೆಲ ದಿನಗಳಲ್ಲಿ ಬರುವುದಾಗಿ ತಿಳಿಸಲಾಗಿದೆ.

ಹೊಸ ಪಬ್​ಜಿಯನ್ನು ಭಾರತೀಯರಿಗಾಗಿಯೇ ತಯಾರಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಹಕರಿಗೆ ಸರಿಹೊಂದುವಂತೆ ಕೆಲವು ಸುಧಾರಣೆಗಳನ್ನು ತರಲಾಗಿದೆ. ಹೊಸ ಪಾತ್ರಗಳು, ಹೆಚ್ಚು ನೈಸರ್ಗಿಕತೆನ್ನು ಅಳವಡಿಸಲಾಗಿದೆ.

ಭಾರತೀಯರ ದತ್ತಾಂಶ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹಾಗಾಗಿ ಹೊಸ ಪಬ್​ಜಿಗೆ ನಿಯಮಿತವಾಗಿ ಆಡಿಟ್​, ದೃಢೀಕರಣ ಮಾಡಲಾಗುವುದು. ದತ್ತಾಂಶಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಅದರ ಜತೆಯಲ್ಲಿ ಭಾರತದ ವಿವಿಧ ಕ್ಷೇತ್ರಗಳಲ್ಲಿ 100 ಮಿಲಿಯನ್​ ಡಾಲರ್​ ಹೂಡಿಕೆ ಮಾಡುವುದಾಗಿಯೂ ತಿಳಿಸಲಾಗಿದೆ.

ಚೀನಾ ಮತ್ತು ಭಾರತ ನಡುವೆ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ ಚೀನಾ ಮೂಲದ 117 ಆ್ಯಪ್​ಗಳನ್ನು ಸೆಪ್ಟೆಂಬರ್​ನಲ್ಲಿ ನಿಷೇಧಿಸಲಾಗಿತ್ತು. ಪಬ್​ಜಿಯನ್ನು ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗಿತ್ತು. ಆದರೆ ಈ ಹಿಂದೆಯೇ ಡೌನ್​ಲೋಡ್​ ಮಾಡಿಕೊಂಡವರಿಗೆ ಆ್ಯಪ್​ ಲಭ್ಯವಿತ್ತು. ಆದರೆ ಇತ್ತೀಚೆಗೆ ಈ ಆ್ಯಪ್​ನ ಸಂಪೂರ್ಣ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. (ಏಜೆನ್ಸೀಸ್​)