ನ್ಯೂಸ್

ಅಧಿಕಾರದ ಬೆನ್ನುಹತ್ತಿ...? ಓಡಿಕೊಂಡು ಪ್ರಚಾರ ಸಭೆಗೆ ಹೋದ ಪ್ರಿಯಾಂಕ!

ಗೌಹಾಟಿ: ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಪುಶ್​ಅಪ್ಸ್​ ಮಾಡಿ ತಮ್ಮ ಫಿಟ್​ನೆಸ್​ ಸಾಬೀತು ಮಾಡಿದ್ದಾಯಿತು. ಈಗ ಸೋದರಿ ಪ್ರಿಯಾಂಕಾ ಗಾಂಧಿ ಸರದಿ! ಅಸ್ಸಾಂ ರಾಜ್ಯದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಓಡಿಕೊಂಡು ತಲುಪಿದ ಪ್ರಿಯಾಂಕಾರ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಸ್ಸಾಂನಲ್ಲಿ ಕಳೆದ ಬಾರಿ ತಪ್ಪಿಹೋದ ಆಡಳಿತದ ಬಸ್ಸನ್ನು ಈ ಬಾರಿ ಹಿಡಿಯಲು ಕಾಂಗ್ರೆಸ್ ಭಾರೀ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ಸಮಯದೊಂದಿಗೆ ರೇಸ್ ಮಾಡಲು ತಯಾರಾಗಿದ್ದಾರೆ!
ಅಸ್ಸಾಂನಲ್ಲಿ ಅವರ ಶೆಡ್ಯೂಲ್ ತುಂಬಾ ಟೈಟಾಗಿದ್ದು, ತೇಜಪುರದಲ್ಲಿ ಮಂಗಳವಾರ ನಿಗದಿಯಾಗಿದ್ದ ಸಾರ್ವಜನಿಕ ಸಭೆಯೊಂದಕ್ಕೆ ತಡವಾಗುತ್ತಿತ್ತು ಎನ್ನಲಾಗಿದೆ. ಆಗ ಬೇಗ ವೇದಿಕೆ ತಲುಪಲು, ಸೀರೆಯುಟ್ಟ ಪ್ರಿಯಾಂಕಾ, ಕ್ರೀಡಾಪಟುವಿನಂತೆ ಸ್ಪ್ರಿಂಟ್ ಮಾಡಿದ್ದಾರೆ!

ವೇದಿಕೆ ಕಡೆಗೆ ಪ್ರಿಯಾಂಕಾ ಓಡುತ್ತಿರುವಂತೆಯೇ, ಅವರ ಅಂಗರಕ್ಷಕರು ಮತ್ತು ಇತರ ಕಾರ್ಯಕರ್ತರು ಅವರೊಂದಿಗೆ ಓಡಿದ್ದಾರೆ. ನಂತರ ತಮ್ಮನ್ನು ನೋಡಿ ಸಂತೋಷ ವ್ಯಕ್ತಪಡಿಸಿದ ಜನರಿಗೆ ಕೈಮುಗಿಯುತ್ತಾ ಬಿರುಸು ನಡೆಯೊಂದಿಗೆ ಅವರು ವೇದಿಕೆಗೆ ಧಾವಿಸಿದ್ದಾರೆ. ಈ ವೀಡಿಯೋ ತುಣುಕನ್ನು ಕಾಂಗ್ರೆಸ್​ನ ಪ್ರಚಾರ ತಂಡ ಬಿಡುಗಡೆ ಮಾಡಿದೆ.

ವೀಡಿಯೋದಲ್ಲಿ, ಸಭೆ ಸೇರಿದ್ದ ಜನರು ಪ್ರಿಯಾಂಕಾರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರೆ, ಈ ಸುದ್ದಿ ಟ್ವೀಟ್ ಆದಾಗ ಅದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. "ಅಕ್ಕ 2099 ಬಂದರೂ ಕಾಂಗ್ರೆಸ್​ಗಾಗಿ ಓಡುತ್ತಿರುತ್ತಾರೆ.. ಅದೇ ವಿಪರ್ಯಾಸ" ಎಂದು ಒಬ್ಬರು ರೀಟ್ವೀಟ್​ ಮಾಡಿದ್ದರೆ, ಮತ್ತೊಬ್ಬರು "ಪೊಲೀಸ್ ಕೆಲಸಕ್ಕೆ ಆಯ್ಕೆ ನಡೆಯುತ್ತಿದೆಯೇ?!" ಎಂದು ಕೇಳಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ