More

    ಪೊಲೀಸರ ಮೇಲೆ ಕಣ್ಗಾವಲು! ಠಾಣೆ​ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸುಪ್ರೀಂ ಡೆಡ್​ಲೈನ್

    ನವದೆಹಲಿ: ಪೊಲೀಸ್​ ಕಸ್ಟಡಿಯಲ್ಲಿ ನಡೆಯುವ ಕಿರುಕುಳವನ್ನು ತಡೆಗಟ್ಟುವ ದೃಷ್ಟಿಯಿಂದ ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜೊತೆಗೇ, ಸಿಬಿಐ, ಇಡಿ, ಎನ್​ಐಎ ಮುಂತಾದ ಕೇಂದ್ರೀಯ ತನಿಖಾ ಸಂಸ್ಥೆಗಳ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಅಗತ್ಯವಿರುವ ಹಣಕಾಸು ಮತ್ತು ಕಾಲಾವಧಿಯ ವಿವರವನ್ನು ಆದಷ್ಟು ಬೇಗ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

    ಪೊಲೀಸ್ ಲಾಕ್​ಅಪ್​ ಸೇರಿದಂತೆ ಪೊಲೀಸ್ ಠಾಣೆಗಳ ಹಲವಾರು ಭಾಗಗಳಲ್ಲಿ ನೈಟ್​ ವಿಷನ್ ಮತ್ತು ಆಡಿಯೊವೀಡಿಯೋ ಎರಡನ್ನೂ ದಾಖಲಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಸ್ಟಡಿಯಲ್ಲಿ ಕಿರುಕುಳ ಅನುಭವಿಸಿದ ವ್ಯಕ್ತಿಗಳು ಈ ಸಿಸಿಟಿವಿ ಫೂಟೇಜನ್ನು ಪಡೆಯುವ ಅವಕಾಶ ಹೊಂದಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿವಿಧ ಪ್ರಾಧಿಕಾರ ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲು ಇದನ್ನು ಬಳಸಬಹುದಾಗಿದೆ. ಆದ್ದರಿಂದ ಕನಿಷ್ಠ ಆರು ತಿಂಗಳವರೆಗೆ ಈ ಸಿಸಿಟಿವಿಗಳ ರೆಕಾರ್ಡಿಂಗ್​ಅನ್ನು ದಾಖಲಿಸಿಡುವ ವ್ಯವಸ್ಥೆ ಕೂಡ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

    ಇದನ್ನೂ ಓದಿ: ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ಪೊಲೀಸ್ ಕಸ್ಟಡಿಯಲ್ಲಿ ಕಿರುಕುಳದ ಬಗ್ಗೆ ಚರ್ಚೆಯಾಗುತ್ತಿರುವ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಕೆ.ಎಂ.ಜೋಸೆಫ್ ಮತ್ತು ಅನಿರುದ್ಧ ಬೋಸ್​ ಅವರ ವಿಭಾಗೀಯ ಪೀಠವು ಇಂದು ಈ ಆದೇಶ ಹೊರಡಿಸಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳು ಒಂದು ತಿಂಗಳೊಳಗೆ ಬಜೆಟ್​ನಲ್ಲಿ ಈ ಕೆಲಸಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿ, ತದನಂತರ 4 ತಿಂಗಳೊಳಗೆ ಅಳವಡಿಕೆಯ ಕಾರ್ಯ ಪೂರೈಸಲು ನ್ಯಾಯಪೀಠ ನಿರ್ದೇಶಿಸಿದೆ.

    ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಕ್ಕೆ ಕ್ರಮವಾಗಿ 9 ತಿಂಗಳ ಮತ್ತು 8 ತಿಂಗಳ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಚುನಾವಣೆ ನಡೆಯಲಿರುವ 5 ರಾಜ್ಯಗಳಿಗೆ ಮಾತ್ರ ವರ್ಷಾಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ವಿವಿಧ ರಾಜ್ಯ ಸರ್ಕಾರಗಳು ನೀಡಿದ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ತ್ವರಿತ ಗತಿಯಲ್ಲಿ ಕಾರ್ಯವನ್ನು ಪೂರೈಸಲು ಕಾಲಾವಧಿಯನ್ನು ನಿಗದಿಪಡಿಸಿದೆ.

    ಇದನ್ನೂ ಓದಿ: “ಕೆಂಪುಕೋಟೆಗೆ ಹೋಗಲು ನಾನು ಯಾರಿಗೂ ಹೇಳಿಲ್ಲ” : ಕೋರ್ಟ್​ ಮುಂದೆ ದೀಪ್ ಸಿಧು

    ‘ನಿಧಾನ ಪ್ರವೃತ್ತಿ ಏಕೆ?’ : ಈ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಎನ್‌ಫೋರ್ಸ್​ಮೆಂಟ್​ ಡೈರೆಕ್ಟರೇಟ್(ಇಡಿ) ಮುಂತಾದ ಕಛೇರಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವಲ್ಲಿ ನಿಧಾನಪ್ರವೃತ್ತಿ ವಹಿಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

    ಕಳೆದ ವರ್ಷ ಡಿಸೆಂಬರ್ 2 ರಂದು ಕೋರ್ಟ್ ನೀಡಿದ್ದ ಆದೇಶದಲ್ಲಿ ಈ ಸಂಸ್ಥೆಗಳ ಕಛೇರಿಗಳಲ್ಲಿ ಸಿಸಿಟಿವಿ ಅಳವಡಿಸಿ ಇಂದು ಆದೇಶ ಪಾಲಿಸಿದ ವರದಿಯನ್ನು ಸಲ್ಲಿಸಲು ನ್ಯಾಯಪೀಠ ಹೇಳಿತ್ತು. ಆದರೆ, ಈ ರೀತಿ ಸಿಸಿಟಿವಿ ಅಳವಡಿಸುವುದರ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲು ಕಾಲಾವಕಾಶ ಬೇಕೆಂದು ಕಾರಣ ಹೇಳಿ ವಿಚಾರಣೆಯನ್ನು ಮುಂದೂಡಲು ಕೇಂದ್ರ ಸರ್ಕಾರ ಕೋರಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್, “ಇದು (ಸಂವಿಧಾನದ) ಆರ್ಟಿಕಲ್ 21 ರ ಕೆಳಗೆ ನೀಡಿರುವ ನಾಗರೀಕರ ಹಕ್ಕಿನ ವಿಚಾರ. ನಾವು ಯಾವುದೇ ನೆಪಗಳನ್ನು ಕೇಳಬಯಸುವುದಿಲ್ಲ” ಎಂದರು.

    ಇದನ್ನೂ ಓದಿ: ಮೋದಿಗಿಂತ ಸಚಿವ ಬಿ.ಸಿ.ಪಾಟೀಲ್ ದೊಡ್ಡವರಾ? ಮನೆಯಲ್ಲೇ ಕೌರವನ ದೌಲತ್ತು!

    ಕೇಂದ್ರೀಯ ತನಿಖಾ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಎಷ್ಟು ಹಣಕಾಸಿನ ಅಗತ್ಯವಿದೆ ಮತ್ತು ಅಳವಡಿಕೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸಿ 3 ವಾರಗಳೊಳಗೆ ಅಫಿಡವಿಟ್ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಟಿಆರ್​ಪಿ ಹಗರಣ : ಪಾರ್ಥೋ ದಾಸ್​ಗುಪ್ತಗೆ ತಾತ್ಕಾಲಿಕ ಜಾಮೀನು

    ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts