ನ್ಯೂಸ್

ಗೂಗಲ್​ ಸರ್ಚ್​, ಕೊಲೆಗೆ ಸ್ಕೆಚ್​! ಕಿರುತೆರೆ ನಟಿ ದುರಂತ ಅಂತ್ಯದ ಕೇಸ್​ಗೆ ಬಿತ್ತು ತೆರೆ; ಸಾಯಿ ಕೃಷ್ಣಗೆ ಜೀವಾವಧಿ ಶಿಕ್ಷೆ | TV Actress

TV Actress Case: ಪ್ರೀತಿ ಹೆಸರಿನಲ್ಲಿ ಕಿರುತೆರೆ ನಟಿ ಅಪ್ಸರಾ ಜತೆಗೆ ದೈಹಿಕ ಸಂಪರ್ಕ ಹೊಂದಿದ್ದಲ್ಲದೇ ಆಕೆಯನ್ನು ಮದುವೆ ಮಾಡಿಕೊಳ್ಳದೆ ಹೊಟ್ಟೆಯಿಂದ ಮಗುವನ್ನು ತೆಗೆಸಿದ್ದ ಆರೋಪಿ ಪೂಜಾರಿ ಸಾಯಿ ಕೃಷ್ಣ, ಎಲ್ಲಿ ತಾನು ಆಕೆಯನ್ನು ವಿವಾಹವಾಗದೆ ಹೋದರೆ ತನ್ನ ಅಸಲಿ ಮುಖವನ್ನು ಎಲ್ಲರೆದೆರೂ ಕಳಚಿಡುತ್ತಾಳೆ ಎಂಬ ಭಯದಲ್ಲಿ ಅಪ್ಸರಾಳನ್ನು ಕೊಲೆಗೈದಿದ್ದ. ಎರಡು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಕೇಸ್​ ಪ್ರಕರಣದಲ್ಲಿ ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಯಾರು ಈ ಅಪ್ಸರಾ-ಸಾಯಿ ಕೃಷ್ಣ?

ತನಗೆ ಮದುವೆಯಾಗಿದ್ದರೂ, ಅಪ್ಸರಾಳ ಜತೆಗೆ ಸಂಬಂಧ ಹೊಂದಿದ್ದ ಸಾಯಿ ಕೃಷ್ಣ, ವೃತ್ತಿಯಲ್ಲಿ ಅರ್ಚಕ. ಇಷ್ಟಾದರೂ ಸಹ ಮದುವೆಯಾಗಿ, ವಿಚ್ಛೇದನ ಪಡೆದುಕೊಂಡಿದ್ದ ಕಿರುತೆರೆ ಕಲಾವಿದೆ ಅಪ್ಸರಾ ಜತೆಗೆ ಆರಂಭದಲ್ಲಿ ಪ್ರೀತಿ ಸಂಬಂಧ ಹೊಂದಿದ್ದ ಕೃಷ್ಣ, ಆಕೆಯೊಂದಿಗಿನ ದೈಹಿಕ ಸುಖಕ್ಕಾಗಿ, ನಟಿಯನ್ನು ನಿಜವಾಗಿ ಪ್ರೀತಿಸುತ್ತಿರುವಂತೆ ನಟಿಸಿ, ಮದುವೆಯಾಗುವುದಾಗಿಯೂ ನಂಬಿಸಿದ್ದ. ನಾಲ್ಕು ವರ್ಷಗಳ ಕಾಲ ಈ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದ್ದ ಅಪ್ಸರಾ, ತನ್ನನ್ನು ಮದುವೆಯಾಗುವಂತೆ ಸಾಯಿಗೆ ಒತ್ತಡ ಹೇರಿದ್ದಳು. ಇದೇ ಆಕೆಯ ದುರಂತ ಅಂತ್ಯಕ್ಕೆ ಕಾರಣವಾಯಿತು.

ತನ್ನ ಜತೆ ದೈಹಿಕ ಸಂಪರ್ಕ ಹೊಂದಿದ್ದೀಯಾ. ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದೀಯಾ! ಇದು ಸರಿಯಲ್ಲ. ನೀನೇನಾದರೂ ನನ್ನನ್ನು ವಿವಾಹವಾಗಲು ಮುಂದಾಗಲಿಲ್ಲ ಎಂದರೆ, ಖಂಡಿತ ನಿನ್ನ ಅಸಲಿ ಮುಖವನ್ನು ಎಲ್ಲರ ಮುಂದೆ ಕಳಚಿಡುತ್ತೇನೆ ಎಂದು ಅಪ್ಸರಾ ಎಚ್ಚರಿಕೆ ನೀಡಿದ್ದಳು. ಇದನ್ನು ಸಹಿಸಲಾಗದ ಸಾಯಿ, ಒಂದೇ ಒಂದು ರಾತ್ರಿಯಲ್ಲಿ ಅಪ್ಸರಾಳ ಉಸಿರನ್ನೇ ನಿಲ್ಲಿಸಿದೆ. ಅಷ್ಟಕ್ಕೂ ಆ ರಾತ್ರಿ ನಡೆದಿದ್ದೇನು? ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.

ಗೂಗಲ್​ನಲ್ಲಿ ಸರ್ಚ್​, ಕೊಲೆಗೆ ಸ್ಕೆಚ್​

ಪರಿಚಯವಾಗಿ ಒಂದು ವರ್ಷದೊಳಗೆ ಅಪ್ಸರಾ-ಸಾಯಿ ಕೃಷ್ಣ ನಡುವಿನ ಬಾಂಧವ್ಯ ಮತ್ತಷ್ಟು ಬಲವಾಯಿತು. ತನ್ನ ತಾಯಿಯೊಂದಿಗೆ ಚೆನ್ನೈನಿಂದ ಹೈದರಾಬಾದ್‌ಗೆ ಬಂದ ಅಪ್ಸರಾ, ಸರೂರ್ ನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ಸಿನಿಮಾ ಅವಕಾಶಗಳನ್ನು ಹುಡುಕುತ್ತಿದ್ದಳು. ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದ ಅಪ್ಸರಾಗೆ, 2022ರಲ್ಲಿ, ಸರೂರ್ ನಗರ ಬಂಗಾರು ಮೈಸಮ್ಮ ದೇವಸ್ಥಾನದ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ವೆಂಕಟ ಸಾಯಿ ಕೃಷ್ಣನ ಪರಿಚಯವಾಯಿತು. ಸಾಯಿ ಕೃಷ್ಣ ಆಗಾಗ್ಗೆ ಆಕೆಯೊಂದಿಗೆ ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದ. ಸಾಯಿ ಆಗಾಗ್ಗೆ ಅವಳನ್ನು ಶಂಶಾಬಾದ್‌ನಲ್ಲಿ ನಡೆಸುತ್ತಿದ್ದ ಗೋಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಹೀಗೆ ಇಬ್ಬರ ನಡುವಿನ ಸ್ನೇಹ ಆಳವಾಗಿ ಬೇರೂರಿತು.

ಇಬ್ಬರೂ ವಾಟ್ಸಾಪ್ ಮೂಲಕ ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದರು. ಆಗಲೇ, ಅಪ್ಸರಾ ಈಗಾಗಲೇ ಮದುವೆಯಾಗಿ ತನ್ನ ಪತಿಗೆ ವಿಚ್ಛೇದನ ನೀಡಿದ್ದರು. ಮತ್ತೊಂದೆಡೆ, ಸಾಯಿ ಕೃಷ್ಣ ಕೂಡ ಮದುವೆಯಾಗಿದ್ದ. ಆದರೆ, ಇಬ್ಬರೂ ಅತ್ಯಾಪ್ತರಾಗಿದ್ದ ಹಿನ್ನೆಲೆ ಇದ್ಯಾವುದು ಹೆಚ್ಚಾಗಿ ಚರ್ಚೆಯಾಗಿರಲಿಲ್ಲ. ಚಿತ್ರಗಳಲ್ಲಿ ನಟಿಸುವ ಅವಕಾಶ ಕೊಡಿಸುವ ನೆಪದಲ್ಲಿ ಆಗಾಗ್ಗೆ ಆಕೆಯನ್ನು ಸಾಯಿ ಭೇಟಿ ಮಾಡುತ್ತಿದ್ದ. ದೈಹಿಕ ಸಂಪರ್ಕ ಬೆಳೆಸಿದ ನಂತರ ಮದುವೆಯಾಗಲು ನಕಾರ ತೆಗೆದಿದ್ದ ಆರೋಪಿ, ಅಪ್ಸರಾಳ ಮಾತಿಗೆ ಒಪ್ಪಿಗೆ ನೀಡಲಿಲ್ಲ. ಇದೇ ಇಬ್ಬರ ನಡುವಿನ ದೊಡ್ಡ ಜಟಾಪಟಿಗೆ ಕಾರಣವಾಯಿತು.

ಜೀವಾವಧಿ ಶಿಕ್ಷೆ, 10 ಲಕ್ಷ ರೂ. ದಂಡ

ಈ ಮಧ್ಯೆ ತನ್ನನ್ನು ಮದುವೆಯಾಗದೆ ಹೋದರೆ ನಿನ್ನ ಕರ್ಮಕಾಂಡವನ್ನು ಎಲ್ಲರೆದುರು ಬಟಾಬಯಲು ಮಾಡುತ್ತೇನೆ ಎಂದು ಅಪ್ಸರಾ ಹೇಳಿದ್ದೇ ತಡ, ಈಕೆಯ ಉಸಿರು ನಿಲ್ಲಿಸುವುದೇ ಕೊನೆಯ ಮಾರ್ಗ ಎಂದು ಸಾಯಿ ನಿರ್ಧರಿಸಿದ. ಇದಕ್ಕಾಗಿ ಗೂಗಲ್​ನಲ್ಲಿ ಹುಡುಕಾಡಿದ ಕಿರಾತಕ, ಹತ್ಯೆಗೆ ಸ್ಕೆಚ್​ ಕೂಡ ರೂಪಿಸಿದ್ದ. ಸರೂರ್ ನಗರದಲ್ಲಿನ ದೇವಾಲಯದ ಹಿಂಭಾಗದ ಆಸ್ಪತ್ರೆಯ ಬಳಿ ಖಾಲಿ ಜಾಗವಿತ್ತು. ಅಪ್ಸರಾಳನ್ನು ಹತ್ಯೆಗೈದ ಬಳಿಕೆ ಆಕೆಯ ದೇಹವನ್ನು 20 ಅಡಿ ಆಳದ ಒಳಚರಂಡಿಗೆ ಎಸೆದು, ಯಾರಿಗೂ ಸುಳಿವು ಸಿಗಬಾರದು ಎಂದು ಸಿಮೆಂಟ್​ನಿಂದ ಮುಚ್ಚಿಹಾಕಿದ್ದ.

2023ರಲ್ಲಿ ದಾಖಲಾದ ಪ್ರಕರಣದ ಕೇಸ್​ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಸಾಯಿ ಕೃಷ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 10 ಲಕ್ಷ ರೂ. ದಂಡ ಕೂಡ ವಿಧಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ 9.75 ಲಕ್ಷ ಮತ್ತು ನ್ಯಾಯಾಲಯಕ್ಕೆ 25,000 ಪಾವತಿಸಲು ನಿರ್ದೇಶಿಸಿದೆ,(ಏಜೆನ್ಸೀಸ್).