

Software Employee : ಸೈಬರ್ ಅಪರಾಧಿಗಳಿಂದ ವಂಚನೆಗೊಳಗಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೊಸ ಹೊಸ ತಂತ್ರಗಳಿಂದ ಜನರನ್ನು ವಂಚಿಸುತ್ತಿರುವ ಸೈಬರ್ ಅಪರಾಧಿಗಳು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಸೈಬರ್ ಅಪರಾಧಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಈ ವಂಚನೆಗಳು ಮಾತ್ರ ನಿಲ್ಲುತ್ತಿಲ್ಲ. ಸೈಬರ್ ಅಪರಾಧಿಗಳ ಮಾತುಗಳನ್ನು ನಂಬಿ ವಂಚನೆಗೆ ಒಗಾಗುತ್ತಿರುವವರಲ್ಲಿ ಉನ್ನತ ಶಿಕ್ಷಣ ಪಡೆದವರೂ ಇದ್ದಾರೆ ಎಂಬುದು ಕಳವಳಕಾರಿ ಸಂಗತಿ. ಇತ್ತೀಚೆಗೆ ಮುಂಬೈನ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಒಂದೇ ಬಾರಿಗೆ 12 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿವಾಸಿಯಾಗಿರುವ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ವಿ.ಕೆ. ರಾಮೇಕ್‌ಬಾಲ್, ಈ ವರ್ಷದ ಜನವರಿಯಲ್ಲಿ 'ಡಿವೈನ್ ಟಾಕ್' ಎಂಬ ಜ್ಯೋತಿಷ್ಯ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದ. ಅದರಲ್ಲಿ ತನ್ನ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಿದ್ದ.
ನಿಶಾಂತ್ ಹೆಸರಿನ ನಕಲಿ ಜ್ಯೋತಿಷಿಯನ್ನು ಆ್ಯಪ್ ಮೂಲಕ ರಾಮೇಕ್‌ಬಾಲ್ ಸಂಪರ್ಕಿಸಿದ್ದ. ಆತನಿಗೆ ಕರೆ ಮಾಡಿದಾಗ ಮುಂಬರುವ ದಿನಗಳಲ್ಲಿ ನೀವು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ನಿಶಾಂತ್ ಹೆದರಿಸಿದ. ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ, ನೀವು ಕೆಲ ಪೂಜೆಗಳನ್ನು ಮಾಡಬೇಕಿದೆ. ಮೊದಲು 6,300 ರೂಪಾಯಿಯನ್ನು ಪಾವತಿಸಿದರೆ, ಪೂಜೆ ಆರಂಭಿಸುತ್ತೇನೆ ಎಂದು ನಿಶಾಂತ್ ಹೇಳಿದ್ದಾನೆ. ಆತನ ಮಾತುಗಳನ್ನು ನಂಬಿದ ರಾಮೇಕ್‌ಬಾಲ್ ಹಣ ಪಾವತಿಸಿದ್ದಾನೆ.
ಹಣ ಪಾವತಿಸಿದ ನಂತರ, ನಿಶಾಂತ್, ಬಡೇ ಮಹಾರಾಜ್ ಎಂಬ ಮತ್ತೊಬ್ಬ ವ್ಯಕ್ತಿಯನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮೇಕ್ಬಾಲ್ಗೆ ಪರಿಚಯಿಸಿದ. ನಿನ್ನ ಪರಿಹಾರಕ್ಕೆ ಸಂಬಂಧಿಸಿದ ಪೂಜೆಗಳನ್ನು ಮಹಾರಾಜ್ ಮಾಡುತ್ತಾರೆ ಎಂದು ರಾಮೇಕ್ಬಾಲ್ಗೆ ತಿಳಿಸಿದ. ಇದಾದ ನಂತರ ಬಡೇ ಮಹಾರಾಜ್ ಮತ್ತು ರಾಮೇಕ್‌ಬಾಲ್ ವಿಡಿಯೋ ಕರೆ ಮೂಲಕ ಮಾತನಾಡಿದರು.
ಪೂಜೆಗಳನ್ನು ಪ್ರಾರಂಭಿಸಲು ಮಹಾರಾಜ್ 15,300 ರೂಪಾಯಿಯನ್ನು ಮುಂಗಡವಾಗಿ ಪಾವತಿಸಲು ಕೇಳಿದ. ತಾನು ಈಗಾಗಲೇ ಸ್ವಲ್ಪ ಮೊತ್ತವನ್ನು ಪಾವತಿಸಿದ್ದೇನೆ ಅಂದ ರಾಮೇಕ್‌ಬಾಲ್. ಆದರೆ ಅದು ಕೇವಲ ಸಲಹಾ ಶುಲ್ಕ, ಪೂಜಾ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಈ ಮೊತ್ತವನ್ನು ಪಾವತಿಸಲೇಬೇಕು ಅಂತ ಬಡೇ ಮಹಾರಾಜ್ ಹೇಳಿದ. ನಂತರ ರಾಮೇಕ್‌ಬಾಲ್ ಯುಪಿಐ ಮೂಲಕ 15,300 ರೂ. ಪಾವತಿಸಿದ. ಪೂಜೆ ಆರಂಭಿಸಿದ ಬಡೇ ಮಹಾರಾಜ್, ಮಧ್ಯದಲ್ಲಿ ಅನೇಕ ನೆಪಗಳನ್ನು ಹೇಳಿ ಸುಮಾರು 28 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದ್ದಾನೆ.
ಪೂಜೆ ಅಪೂರ್ಣವಾಗಿದ್ದು, ಪೂಜೆಯನ್ನು ಮಧ್ಯದಲ್ಲಿ ನಿಲ್ಲಿಸಿದರೆ ಜೀವಕ್ಕೆ ಅಪಾಯವಿದೆ ಎಂದು ಬಡೇ ಮಹಾರಾಜ್, ರಾಮೇಕ್ಬಾಲ್ಗೆ ಬೆದರಿಕೆ ಹಾಕಿದ. ಈ ರೀತಿ ಬೆದರಿಕೆ ಹಾಕಿ ಜನವರಿಯಿಂದ ಮಾರ್ಚ್ ವರೆಗೆ ಹಲವು ಹಂತಗಳಲ್ಲಿ ಹಣ ಸಂಗ್ರಹಿಸಿದ್ದಾನೆ. ಒಟ್ಟು 12.50 ಲಕ್ಷ ರೂ.ಗಳನ್ನು ರಾಮೇಕ್ಬಾಲ್ನಿಂದ ಸಂಗ್ರಹಿಸಿದ್ದಾನೆ. ಕೊನೆಗೆ ಇದೆಲ್ಲವೂ ವಂಚನೆ ಎಂದು ಅರಿತುಕೊಂಡ ರಾಮೇಕ್‌ಬಾಲ್ ಪೊಲೀಸರನ್ನು ಸಂಪರ್ಕಿಸಿದರು.
ಸದ್ಯ ಪ್ರಕರಣ ದಾಖಲಾಗಿದ್ದು, ಸೈಬರ್ ಅಪರಾಧಿಗಳನ್ನು ಗುರುತಿಸುವ ಕೆಲಸ ಆರಂಭವಾಗಿದೆ. (ಏಜೆನ್ಸೀಸ್)