ನ್ಯೂಸ್

ಪತಿ ಮೃತಪಟ್ಟರು ಬಿಡಲಿಲ್ಲ... ಗರ್ಭಿಣಿಯಿಂದಲೇ ಹಾಸಿಗೆ ಸ್ವಚ್ಛಗೊಳಿಸಿದ ಆಸ್ಪತ್ರೆ ಸಿಬ್ಬಂದಿ! Pregnant Women

ಭೋಪಾಲ್​: ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿದ್ದ ಪತಿ ಕೊನೆಗೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಅತ್ತ ಗಂಡ ಮೃತಪಟ್ಟಿರುವುದಕ್ಕೆ ದುಃಖ ಪಡುತ್ತಿರುವ ಐದು ತಿಂಗಳ ಗರ್ಭಿಣಿ ಮಹಿಳೆಯಿಂದಲೇ (Pregnant Women) ಪತಿ ಮಲಗಿದ್ದ ಹಾಸಿಗೆಯನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿರುವ ಆಸ್ಪತ್ರೆ ಸಿಬ್ಬಂದಿಗಳ ಅಮಾನವೀಯ ನಡೆ ಮಧ್ಯಪ್ರದೇಶದ ಭೋಪಾಲ್​ನಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದೆ.

ದುಃಖದಲ್ಲೇ ರಕ್ತದ ಕಲೆಗಳಿಂದ ಕೂಡಿದ್ದ ಆಸ್ಪತ್ರೆಯ ಹಾಸಿಗೆಯನ್ನು ಗರ್ಭಿಣಿ ಸ್ವಚ್ಛಗೊಳಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಮೃತ ಪತಿಯನ್ನು 28 ವರ್ಷದ ರಾಮರಾಜ್ ಮರಾವಿ ಎಂದು ಗುರುತಿಸಲಾಗಿದ್ದು, ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನಲೆ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ರಾಮರಾಜ್​ ಮೃತಪಟ್ಟಿದ್ದಾರೆ. ಈ ವೇಳೆ ಪತಿ ಅಗಲಿಕೆಯಿಂದ ಕಂಗಾಲಾಗಿದ್ದ ಐದು ತಿಂಗಳ ಗರ್ಭಿಣಿಯಿಂದಲೇ ಹಾಸಿಗೆ ಮೇಲಿದ್ದ ರಕ್ತದ ಕಲೆಗಳನ್ನು ಆಸ್ಪತ್ರೆ ಸಿಬ್ಬಂದಿಗಳು ಸ್ವಚ್ಛಗೊಳಿಸಿರುವುದು ವೈರಲ್ ಆಗಿರುವ ದೃಶ್ಯಗಳಲ್ಲಿ ಸೆರೆಯಾಗಿದೆ.

ಸ್ವಚ್ಛಗೊಳಿಸುವಂತೆ ಹೇಳಿಲ್ಲ

ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ದಿಂಡೋರಿ ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು, "ಮಹಿಳೆ ತನ್ನ ಪತಿಯನ್ನು ಅಮಾನುಷವಾಗಿ ಥಳಿಸಿದ್ದರಿಂದ ಆತನ ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಳು. ಆಕೆಗೆ ಯಾರು ಹಾಸಿಗೆಯನ್ನು ಸ್ವಚ್ಛಗೊಳಿಸುವಂತೆ ಹೇಳಿಲ್ಲ" ಎಂದು ತಿಳಿಸಿದ್ದಾರೆ. ಅಸಲಿಗೆ ಮಹಿಳೆಯ ಪತಿ ಮೃತಪಟ್ಟಿದ್ದು ಭೂಮಿ ವಿಚಾರಕ್ಕೆ ನಡೆದ ಜಟಾಪಟಿಯಲ್ಲಿ ಎಂದು ವರದಿ ಉಲ್ಲೇಖಿಸಿದೆ.

ರಾಮರಾಜ್ ಸಹೋದರರು ಮತ್ತು ತಂದೆಯೂ ಸಾವು

ರಾಮರಾಜ್ ಅವರ ಸಹೋದರರಾದ ಶಿವರಾಜ್ ಮರಾವಿ (40) ಮತ್ತು ರಘುರಾಜ್ ಮರಾವಿ (35) ಅವರ ತಂದೆ ಧರಂ ಸಿಂಗ್ ಮರಾವಿ (65)ಅವರನ್ನು ರಾಮರಾಜ್ ಸಾಯುವ ಮುನ್ನ ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಮಾರಾಮಾರಿಯಲ್ಲಿ ಸಿಲುಕಿದ ರಾಮರಾಜ್​ ಕೂಡ ಗಂಭೀರವಾಗಿ ಹಲ್ಲೆಗೊಳಗಾದ ಕಾರಣ, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇದೀಗ ಮೃತಪಟ್ಟಿದ್ದಾರೆ. ಗುರುವಾರ (ಅ.31) ಸಂಜೆ 5:00ರಿಂದ 6:00 ಗಂಟೆಯ ಆಸುಪಾಸಿನಲ್ಲಿ ಈ ಹತ್ಯೆಗಳು ಸಂಭವಿಸಿವೆ ಎಂದು ಪೊಲೀಸರು ಹೇಳಿದ್ದಾರೆ. ಮಾರಣಾಂತಿಕ ದಾಳಿಯಲ್ಲಿ ಸುಮಾರು 20ರಿಂದ 25 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).