ನ್ಯೂಸ್

ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ, ಹಿಂದೆಂದೂ ಕೈಗೊಳ್ಳದಷ್ಟು ಭಾರಿ ಭದ್ರತೆ: ಅಲೋಕ್​ ಕುಮಾರ್​

Webdesk - Manjunatha B

ಬೆಂಗಳೂರು: ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ರಾಜ್ಯದಾದ್ಯಂತ1.56 ಲಕ್ಷ ಪೊಲೀಸರನ್ನು ಚುನಾವಣಾ ಭದ್ರತೆಗೆ ನಿಯೋಜಿಸಿ ಅಭೂತಪೂರ್ವ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಮತದಾನಕ್ಕೆ 55,282 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅವುಗಳಿಗೆ ಪೊಲೀಸ್ ಸಿಬ್ಬಂದಿಯ ಜತೆಗೆ ಹೆಚ್ಚುವರಿಯಾಗಿ ಸಿಎಪಿಎಫ್​ ಕಂಪನಿಗಳನ್ನು ನಿಯೋಜಿಸಲಾಗಿದೆ.

ಚುನಾವಣಾ ಭದ್ರತೆಗೆ ಸಿಬ್ಬಂದಿ ನಿಯೋಜನೆ

ರಾಜ್ಯದ ಕಮಿಷನರೇಟ್‌ಗಳಲ್ಲಿ ಕಮಿಷನ್‌ರ್‌ಗಳು, ಜಿಲ್ಲೆಗಳಲ್ಲಿ ಎಸ್‌ಪಿಗಳು ಚುನಾವಣಾ ನಿಗಾ ವಹಿಸಲಿದ್ದಾರೆ. ಚುನಾವಣಾ ಭದ್ರತೆಗೆ 304 ಡಿವೈಎಸ್‌ಪಿಗಳು, 991 ಇನ್‌ಸ್ಪೆಕ್ಟರ್‌ಗಳು, 2,610 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳು, 5,803 ಎಎಸ್‌ಐಗಳು, 46,421 ಮುಖ್ಯಪೇದೆಗಳು, 27,990 ಮಂದಿ ಹೋಮ್ಗಾರ್ಡ್‌ಗಳು ಸೇರಿ 84,119 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅವಶ್ಯಕತೆಗೆ ಅನುಗುಣವಾಗಿ ಅಧಿಕಾರಿಗಳ ಸಿಬ್ಬಂದಿ ಕೊರತೆಯನ್ನು ಸರಿದೂಗಿಸಲು ಹೊರ ರಾಜ್ಯದಿಂದ 8,500 ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ಪಡೆಯಲಾಗಿದೆ. ಇದರ ಜತೆಗೆ 650 ಸಿಎಪಿಎಫ್​ ಕಂಪನಿಗಳ ಜತೆಗೆ ರಾಜ್ಯ ಶಸಸ ಮಿಸಲು ಪಡೆಯನ್ನು ನಿಯೋಜಿಸಲಾಗಿದೆ.

ಸಂಗ್ರಹ ಚಿತ್ರ

ಗಸ್ತುಗೆ ಸಿಬ್ಬಂದಿ ನೇಮಕ

ಚುನಾವಣೆಗೆ 2930 ಸೆಕ್ಟರ್ ಮೊಬೈಲ್‌ಗಳು ಕಾರ್ಯಾಚಾರಣೆಯಲ್ಲಿದ್ದು, ಒಂದೊಂದು ಸೆಕ್ಟರ್‌ಗೆ 20 ಬೂತ್‌ಗಳನ್ನು ನಿಗದಿ ಪಡಿಸಲಾಗಿದೆ. ಪಿಎಸ್‌ಐ, ಎಎಸ್‌ಐ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿರಂತರ ಗಸ್ತುಗೆ ಮೀಸಲಿರಿಸಲಾಗಿದೆ.

ಸೆಕ್ಟರ್ ಮೊಬೈಲ್‌ಗಳ ಮೆಲ್ವಿಚಾರಣೆಗೆ ೭೪೯ ಮೇಲ್ವಿಚಾರಣಾ ಮೊಬೈಲ್‌ಗಳಿದ್ದು, ಅವುಗಳ ಉಸ್ತುವಾರಿಗೆ ಓರ್ವ ಪೊಲೀಸ್ ಇನ್‌ಸ್ಪೆಕ್ಟರ್, 4 ಸೆಕ್ಟರ್ ಮೊಬೈಲ್ ಮೇಲ್ವಿಚಾರಣೆಗೆ ಓರ್ವ ಡಿವೈಎಸ್‌ಪಿ ನೇಮಿಸಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು 700ಕ್ಕೂ ಹೆಚ್ಚು ವಿಚಕ್ಷಣಾ ದಳಗಳನ್ನು ನೇಮಿಸಿ ಸೂಕ್ಮ ಪ್ರದೇಶಗಳನ್ನು ಒಳಗೊಂಡತೆ ಅಂತರಾಜ್ಯ, ಅಂತರ್ ಜಿಲ್ಲಾ ಗಡಿ ಭಾಗಗಳಲ್ಲಿ 700ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

714 ಮಂದಿ ಗಡಿಪಾರು

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 30,418 ಭದ್ರತಾ ಪ್ರಕರಣಗಳನ್ನು ದಾಖಲಿಸಿ ಅವುಗಳಲ್ಲಿ ಸನ್ನಡತೆಯ ಆಧಾರದ ಮೇಲೆ 53,406 ವ್ಯಕ್ತಿಗಳನ್ನು ಬಾಂಡ್ ಒವರ್ ಮಾಡಲಾಗಿದೆ.

ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ 714 ವ್ಯಕ್ತಿಗಳ ವಿರುದ್ಧ ಗಡಿಪಾರು ಕಾಯ್ದೆಯಡಿ ಕ್ರಮ ಕೈಗೊಂಡು 68 ಹ್ಯವಾಸಿ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನೇಮಿಸಲಾದ ಒಟ್ಟು 650 ಸಿಎಪಿಎಫ್​​ ಕಂಪನಿಗಳಲ್ಲಿ 101 ಸಿಆರ್‌ಪಿಎಫ್​, 108 ಬಿಎಸ್‌ಎಫ್​, 75 ಸಿಐಎಸ್‌ಎಫ್, 70 ಐಟಿಬಿಪಿ, 75 ಎಸ್‌ಎಸ್‌ಬಿ, 35 ಆರ್‌ಪಿಎ್ ಹಾಗೂ 186 ಎಸ್‌ಎಪಿ ಕಂಪನಿಗಳಿವೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.