ಬೆಂಗಳೂರು: ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವಿಕೆ ಸೇರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಕಾ ವೈರಾಣು ತಡೆಯಬೇಕಿದೆ. ಈ ರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಉಚಿತವಾಗಿ ದೊರೆಯಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ಣೂ ಓದಿ: ಇವರು ನಮ್ಮವರು ಎಂದೆನಿಸಿದಾಗ ಅವರು ಭಾರವಾಗುವುದೇ ಇಲ್ಲ
ಡೆಂಘೆ, ಚಿಕೂನ್ಗುನ್ಯಾ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಯಿಂದ ಜಿಕಾ ಸೋಂಕು ಸಹ ಹರಡಲಿದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆಯು ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಜಿಕಾ ಸೋಂಕಿಗೆ ಒಳಗಾಗುವವರಲ್ಲಿ ಬಹುತೇಕರಿಗೆ ರೋಗಲಕ್ಷಣ ಕಂಡು ಬರುವುದಿಲ್ಲ. ಹಾಗಾಗಿ ಸೋಂಕಿನ ಬಗ್ಗೆ ಆತಂಕ ಪಡುವ ಬದಲು, ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಜಿಕಾ ರೋಗ ಲಕ್ಷಣಗಳಾಗಿದ್ದು, ಗರ್ಭಿಣಿಯರು ಈ ಜ್ವರಕ್ಕೆ ಒಳಗಾದಲ್ಲಿ ಜನಿಸಿದ ಶಿಶುವಿನ ತಲೆಯ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರೋಗಲಕ್ಷಣ ಕಂಡು ಬಂದಲ್ಲಿ ರಕ್ತ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಮುಂಜಾಗ್ರತಾ ಕ್ರಮಗಳು: ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸುವುದು, ಮನೆಯ ಒಳಾಂಗಣ ಹಾಗೂ ಹೊರಾಂಗಣ ಸ್ಚಚ್ಛವಾಗಿಡುವುದು. ನೀರು ಸಂಗ್ರಹಣಾ ಪರಿಕರಣಗಳನ್ನು ವಾರಕ್ಕೊಮ್ಮೆ ಸ್ಚಚ್ಛಗೊಳಿಸುವುದು ಹಾಗೂ ಅದರ ಮೇಲೆ ಮುಚ್ಚಳ ಮುಚ್ಚುವುದು. ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ನೀರು ನಿಲ್ಲದಂತೆ ಎಚ್ಚರವಹಿಸುವುದು. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು. ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು ಸೇರಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ನಿರ್ದಿಷ್ಟ ಚಿಕಿತ್ಸೆ, ಲಸಿಕೆ ಇಲ್ಲ:
ಜಿಕಾ ವೈರಾಣು ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಇದಕ್ಕೆ ಸಾಕಷ್ಟು ವಿಶ್ರಾಂತಿ ಅಗತ್ಯವಿದ್ದು, ದೇಹ ನಿರ್ಜಲೀಕರಣ ಆಗುವುದನ್ನು ತಪ್ಪಿಸಲು ಹೆಚ್ಚು ನೀರಿನ ಅಂಶವುಳ್ಳ ಅಹಾರ ಪದಾರ್ಥ ಸೇವಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡುವ ಔಷಧ ಸೇವಿಸಬೇಕು. ರೋಗ ಲಕ್ಷಣ ಹೆಚ್ಚದರೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು.