ನ್ಯೂಸ್

ಜಿಟಿಡಿಗೆ ಚಾಮುಂಡೇಶ್ವರಿ ಅಗ್ನಿಪರೀಕ್ಷೆ: ಜೆಡಿಎಸ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್, ಬಿಜೆಪಿ ಸಿದ್ಧತೆ

| ಮಂಜುನಾಥ ಟಿ. ಭೋವಿ ಮೈಸೂರು

‘ಚಾಮುಂಡೇಶ್ವರಿ’ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಪ್ರಮುಖ ವಿಧಾನಸಭಾ ಕ್ಷೇತ್ರ. ಇಲ್ಲಿನ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಇದೀಗ ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಕಳೆದ ಬಾರಿ ಮುಖ್ಯಮಂತ್ರಿಯನ್ನೇ ಪರಾಭವಗೊಳಿಸಿ, ರಾಜ್ಯದ ಗಮನ ಸೆಳೆದಿದ್ದ ಜಿಟಿಡಿ ಅವರನ್ನು ಈ ಬಾರಿ ಸೋಲಿಸಲೇಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಣ ತೊಟ್ಟಿವೆ. ಅದರಂತೆ, ಉಭಯ ಪಕ್ಷಗಳೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಪೈಪೋಟಿ ಎದುರಾಗಲಿದೆ.

ಸಿದ್ದರಾಮಯ್ಯರ ಕರ್ಮಭೂಮಿ: ಚಾಮುಂಡೇಶ್ವರಿ ಕ್ಷೇತ್ರ ರಾಜ್ಯದ ಪ್ರಭಾವಿ ರಾಜಕಾರಣಿ, ಮಾಜಿ ಸಿಎಂ ಹಾಗೂ ಹಾಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ಕರ್ಮಭೂಮಿ. ಅವರಿಗೆ ರಾಜಕೀಯ ಶಕ್ತಿ ನೀಡಿದ ಚುನಾವಣಾ ಅಖಾಡ. ಇಲ್ಲಿಯವರೆಗೆ ನಡೆದ 13 ಚುನಾವಣೆಗಳ ಪೈಕಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ 5 ಬಾರಿ ಜಯ ಕಂಡಿದ್ದರು. ಜೆಡಿಎಸ್​ನಿಂದ ಹೊರಬಂದ ಬಳಿಕ ನಡೆದ 2006ರ ಉಪಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 257 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯವಾಗಿ ಮರುಜನ್ಮ ಪಡೆದದ್ದು ಇತಿಹಾಸ.

ಆದರೆ, ಸುದೀರ್ಘ ಕಾಲ ಕೈಹಿಡಿದಿದ್ದ ಈ ಕ್ಷೇತ್ರ ಕಳೆದ (2018) ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕೈಬಿಟ್ಟಿತು. ಒಂದು ಕಾಲದ ಆಪ್ತ ಸ್ನೇಹಿತರಾಗಿದ್ದ ಜಿ.ಟಿ.ದೇವೇಗೌಡ, ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿದರು. ಇದೇ ಕಾರಣದಿಂದ ಜಿಡಿಟಿ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದು ಪ್ರಸಿದ್ಧರಾದರು. ಇದೀಗ ಹ್ಯಾಟ್ರಿಕ್ ಜಯದ ಕನಸಿನೊಂದಿಗೆ ಜಿ.ಟಿ.ದೇವೇಗೌಡ ಮುಂದಿನ ಚುನಾವಣೆ ಎದುರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿಯ ಚುನಾವಣೆ ಅವರಿಗೆ ಅಗ್ನಿಪರೀಕ್ಷೆಯೇ ಸರಿ.

ಗೆಲ್ಲುವ ಕುದುರೆಗಾಗಿ ಹುಡುಕಾಟ: 3 ವರ್ಷಗಳಿಂದಲೂ ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದ ಜಿ.ಟಿ.ದೇವೇಗೌಡ ಆ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಡೆಗೆ ಒಲವು ತೋರಿದ್ದರು. ಚಾಮುಂಡೇಶ್ವರಿಯಿಂದ ತನಗೆ ಮತ್ತು ಹುಣಸೂರು ಕ್ಷೇತ್ರದಿಂದ ಪುತ್ರ ಜಿ.ಡಿ.ಹರೀಶ್​ಗೌಡಗೆ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿ ಅಥವಾ ಕಾಂಗ್ರೆಸ್​ನಿಂದ ಅಪ್ಪ-ಮಗ ಇಬ್ಬರಿಗೂ ಒಮ್ಮೆಗೇ ಟಿಕೆಟ್ ಸಿಗುವುದು ದುರ್ಲಭ ಎಂಬುದು ಖಾತ್ರಿ ಆಗುತ್ತಿದ್ದಂತೆ ಯೂಟರ್ನ್ ಹೊಡೆದು, ಜೆಡಿಎಸ್​ನಲ್ಲಿಯೇ ಮುಂದುವರಿಯಲು ನಿರ್ಧರಿಸಿದರು. ಅವರ ಈ ನಿಲುವು ಉಭಯ ಪಕ್ಷಗಳಿಗೂ ಸಿಟ್ಟು ತರಿಸಿದ್ದು, ಅದೇ ಕಾರಣದಿಂದ ಈ ಬಾರಿ ಹೇಗಾದರೂ ಮಾಡಿ ಜಿಟಿಡಿ ಸೋಲಿಸಬೇಕೆಂಬ ಹಠಕ್ಕೆ ಬಿದ್ದಿವೆ. ಆದರೆ, ಜಿಟಿಡಿ ಸೋಲಿಸುವಂತಹ ಪ್ರಬಲ ಅಭ್ಯರ್ಥಿಗಳು ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಕಾಣುತ್ತಿಲ್ಲ. ಆಕಾಂಕ್ಷಿಗಳ ಪೈಕಿ ವೈಯಕ್ತಿಕ ವರ್ಚಸ್ಸು, ಜನಬೆಂಬಲ ಹೊಂದಿರುವವರು ಯಾರೂ ಇಲ್ಲ. ಆದ್ದರಿಂದ ಉಭಯ ಪಕ್ಷಗಳಲ್ಲೂ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆದಿದ್ದು, ಅವರು ಯಾರಾಗಬಹುದು ಎಂಬುದು ಸದ್ಯಕ್ಕೆ ಕೌತುಕ.

ರಮ್ಯಾ, ಶಶಿಕುಮಾರ್ ಬರ್ತಾರಾ?: ಜಿ.ಟಿ.ದೇವೇಗೌಡರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಆದ್ದರಿಂದ ಸಿನಿಮಾ ನಟರನ್ನು ಕರೆತರುವ ಕುರಿತು ಚಿಂತನೆ ನಡೆದಿದೆ. ಅಂತೆಯೇ, ಮಾಜಿ ಸಂಸದರೂ ಆಗಿರುವ ರಮ್ಯಾ ಮತ್ತು ಶಶಿಕುಮಾರ್ ಕ್ರಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಿ ಬರಬಹುದು ಎಂಬ ಚರ್ಚೆ ರಾಜಕೀಯ ಗರ್ಭಗುಡಿಯಿಂದ ಪ್ರತಿಧ್ವನಿಸುತ್ತಿದೆ. ಶಶಿಕುಮಾರ್ ಅವರನ್ನು ಕರೆತರಲು ಕಾಂಗ್ರೆಸ್ ಮೊದಲು ಪ್ರಯತ್ನಿಸಿತ್ತು. ಈ ಸುಳಿವು ಅರಿತುಕೊಂಡ ಬಿಜೆಪಿ ಅವರನ್ನು ತನ್ನತ್ತ ಸೆಳೆದುಕೊಂಡಿದೆ. ಆದರೆ ಬಿಜೆಪಿ ಸೇರ್ಪಡೆಯಾಗಿದ್ದರೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಶಶಿಕುಮಾರ್ ಮನಸ್ಸು ಮಾಡಿಲ್ಲ ಎನ್ನಲಾಗಿದೆ.

ಸಿದ್ದು ಸ್ಪರ್ಧೆ ಇಲ್ಲ: ‘ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇದು ಕಾಂಗ್ರೆಸ್ ಆಕಾಂಕ್ಷಿಗಳ ದಾರಿಯನ್ನು ಸುಗಮಗೊಳಿಸಿದೆ. ಹೀಗಾಗಿ, ಆ ಪಕ್ಷದಲ್ಲಿ ಟಿಕೆಟ್ ಬಯಸುವವರ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್​ನಿಂದ ಟಿಕೆಟ್ ಬಯಸಿ 8 ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ, ಜಿಪಂ ಮಾಜಿ ಸದಸ್ಯ ಅರುಣ್​ಕುಮಾರ್, ಜಿಪಂ ಮಾಜಿ ಸದಸ್ಯರಾದ ಕೂರ್ಗಳ್ಳಿ ಮಹದೇವ, ಲೇಖಾ ವೆಂಕಟೇಶ್, ಮುಖಂಡ ರಾಕೇಶ್ ಪಾಪಣ್ಣ, ಸ್ಟೀಲ್ ಉದ್ಯಮಿ ಕೃಷ್ಣಕುಮಾರ್ ಸಾಗರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ನಿರ್ದೇಶಕ ಮಲ್ಲಹಳ್ಳಿ ಮಹದೇವಸ್ವಾಮಿ ಕೈ ಟಿಕೆಟ್ ಕೋರಿದ್ದಾರೆ.

ಖಾತೆ ತೆರೆಯದ ಬಿಜೆಪಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಖಾತೆ ತೆರೆಯಲು ಬಿಜೆಪಿಗೆ ಈವರೆಗೂ ಸಾಧ್ಯವಾಗಿಲ್ಲ. ದುರ್ಬಲ ಸಂಘಟನೆ, ನಾಯಕತ್ವ ಕೊರತೆಯಿಂದಾಗಿ ಕನಿಷ್ಠ ಪ್ರಬಲ ಸ್ಪರ್ಧೆ ನೀಡಲೂ ಆಗದೆ, ಹಿಂದಿನಿಂದಲೂ ಮೂರನೇ ಸ್ಥಾನವನ್ನೇ ಕಾಯ್ದುಕೊಂಡಿದೆ. ಆದಾಗ್ಯೂ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಪಕ್ಷದ ಮಾಜಿ ಕ್ಷೇತ್ರಾಧ್ಯಕ್ಷ ಅರುಣ್​ಕುಮಾರ್ ಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್​ಕುಮಾರ್ ಗೌಡ, ಎಸ್​ಟಿ ಮೋರ್ಚಾ ಮಾಜಿ ಕಾರ್ಯದರ್ಶಿ ಧನಂಜಯ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್​ನಲ್ಲಿ ಬಂಡಾಯ: ಜಿಟಿಡಿ ಮತ್ತು ಜೆಡಿಎಸ್​ಗೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ. ಜೆಡಿಎಸ್​ನಿಂದ ದೂರ ಉಳಿದಿದ್ದ ಜಿಟಿಡಿ ಮತ್ತೆ ವಾಪಸ್ ಆಗಿರುವುದು ಆ ಪಕ್ಷದಲ್ಲಿರುವ ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಸಿಡಿದೆದ್ದಿರುವ ಬಂಡಾಯಗಾರರ ಗುಂಪು ಜಿಟಿಡಿ ಅವರನ್ನು ಸೋಲಿಸುವ ಶಪಥ ಮಾಡಿದ್ದು, ಇದು ಶಮನವಾಗದಿದ್ದರೆ ಚುನಾವಣೆಯಲ್ಲಿ ಪರಿಣಾಮ ಬೀರಬಹುದು.