ಬೆಂಗಳೂರು: ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಆರೋಪದಡಿ ವಿಶೇಷ ತನಿಕಾ ದಳದ (SIT) ವಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಲಯ ಜೂನ್ 06ರವರೆಗೆ ಎಸ್ಐಟಿ ವಶಕ್ಕೆ ನೀಡಿದ್ದು, ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಇತ್ತ ವಿಚಾರಣೆಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅಸಹಕಾರ ತೋರುತ್ತಿದ್ದಾರೆ ಎಂದು ವರದಿಯಾಗಿದ್ದು, ಅಧಿಕಾರಿಗಳಿಗೆ ಮರುಪ್ರಶ್ನೆ ಎಸೆಯುತ್ತಿದ್ದಾರೆ ಎಂದು ವರದಿಯಾಗಿದೆ.
ನನ್ನ ವಿರುದ್ಧ ದೂರು ಕೊಟ್ಟ ಮಹಿಳೆ ಯಾರು ಅನ್ನೊದೆ ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ ಎನ್ನುವುದೂ ನನಗೆ ಗೊತ್ತಿಲ್ಲ. ತೋಟದ ಮನೆ, ಊರು, ಬೆಂಗಳೂರಿನಲ್ಲಿ ಕೆಲಸದವರಿದ್ದಾರೆ. ಈ ವೇಳೆ ಮನೆಯಲ್ಲಿರುವ ಕೆಲಸದವರು ಯಾರು ಅನ್ನೊದು ಗೊತ್ತಿಲ್ಲ. ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂದು ಪ್ರಜ್ವಲ್ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡಿರುವುದಾಗಿ ವರದಿಯಾಗಿದೆ.
ಆಕೆ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಇವರನ್ನು ನಾನು ನೋಡಿಯೇ ಇಲ್ಲ. ನಾನು ಬೆಂಗಳೂರು, ಹಾಸನ, ದೆಹಲಿಯಲ್ಲಿರುತ್ತೇನೆ. ನನಗೆ ಇವರು ಯಾರು ಅನ್ನೊದು ಗೊತ್ತಿಲ್ಲ. ಇವರು ನನ್ನ ಬಗ್ಗೆ ಏನೆಂದು ದೂರು ಕೊಟ್ಟಿದ್ದಾರೆ. ಈ ವಿಚಾರಗಳು ನನಗೇನು ಗೊತ್ತಿಲ್ಲ. ಅವರಿಗೆಲ್ಲ ನಾನು ಯಾಕೆ ಹಾಗೆ ಮಾಡಲಿ ನನಗೆ ಅವರು ಯಾರು ಎನ್ನುವುದೇ ಗೊತ್ತಿಲ್ಲ.
ನಾಲ್ಕು ವರ್ಷದ ಹಿಂದೆ ನಡೆದಿದೆ ಅಂತಾರೆ. ನನಗೆ ಅವರು ಯಾರು ಅನ್ನೊದು ಗೊತ್ತಿಲ್ಲ. ಯಾಕೆ ಆಗ ಅವರು ದೂರು ಕೊಟ್ಟಿರಲಿಲ್ಲ. ದೂರು ಕೊಡದೇ ಇಲ್ಲಿವರೆಗೂ ಏನು ಮಾಡುತಿದ್ದರಂತೆ. ನಾನು ಯಾರ ಜೊತೆಯೂ ಮಾತನಾಡಲ್ಲ. ಇವರು ಯಾರೆಂಬುದೇ ನನಗೆ ಗೊತ್ತಿಲ್ಲ. ಇದೆಲ್ಲದರ ಹಿಂದೆ ಕಾರ್ತಿಕನ ಕೆಲಸವಿದೆ. ಅವನನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿ. ಆಗ ಇದಕ್ಕೆಲ್ಲ ಸರಿಯಾದ ಉತ್ತರ ಸಿಗತ್ತೆ. ಎಷ್ಟು ದುಡ್ಡು ಕೊಟ್ಟು ಇವರನ್ನು ಕರೆತಂದಿದ್ದಾನೆ ಅಂತ. ಆಗ ಎಲ್ಲ ಉತ್ತರ ನಿಮಗೆ ಸಿಗತ್ತೆ ಎಂದು ವಿಚಾರಣೆ ವೇಳೆ ಪ್ರಜ್ವಲ್ ಎಸ್ಐಟಿ ಅಧಿಕಾರಿಗಳ ಬಳಿ ಹೇಳಿರುವುದಾಗಿ ವರದಿಯಾಗಿದೆ.