ನ್ಯೂಸ್

ಕೊಲ್ಹಾಪುರಿ ಚಪ್ಪಲಿ​ ವಿನ್ಯಾಸದಲ್ಲೇ ರೂಪಿಸಿದ ಇಟಲಿ​ ಬ್ರ್ಯಾಂಡ್​ಗೆ ಛೀಮಾರಿ; ಕಡೆಗೂ ವಿವಾದಕ್ಕೆ ಪ್ರಾಡಾ ಸ್ಪಷ್ಟನೆ | Prada

ಮೋಹನ್​ ಶೆಟ್ಟಿ

Prada: ಇಟಲಿಯ ಉನ್ನತ ಮಟ್ಟದ ಫ್ಯಾಷನ್ ಬ್ರ್ಯಾಂಡ್ ಪ್ರಾಡಾ ಇದೀಗ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ಭಾರತದ ಸಾಂಸ್ಕೃತಿಕ ಸಂಕೇತವಾಗಿರುವ ಕೊಲ್ಹಾಪುರಿ ಚಪ್ಪಲಿ ವಿನ್ಯಾಸದಲ್ಲೇ ತಮ್ಮ ಮುಂಬರುವ 2026ರ ವಸಂತ ಬೇಸಿಗೆ ಪುರುಷರ ಈವೆಂಟ್​​ಗಾಗಿ ತಯಾರಿಸಿದೆ. ಸದ್ಯ ಇದೇ ದೇಶದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದ್ದು, ತೀವ್ರ ಚರ್ಚೆಗಳನ್ನು ಹುಟ್ಟುಹಾಕಿದೆ.

ಫ್ಯಾಶನ್ ಬ್ರ್ಯಾಂಡ್​ ಪ್ರಾಡಾ ಪ್ರಸ್ತುತಪಡಿಸಿರುವ ಈ ಚಪ್ಪಲಿ ವಿನ್ಯಾಸವು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಶತಮಾನಗಳಿಂದ ಕುಶಲಕರ್ಮಿಗಳು ರಚಿಸಿ, ಮುಂದುವರಿಸಿಕೊಂಡು ಬಂದಿರುವ ಪಾರಂಪರಿಕ ಚರ್ಮದ ಪಾದರಕ್ಷೆಗಳ ಸಂಕೇತವಾಗಿದೆ. ಇದಕ್ಕೆ ಹೋಲುವಂತೆಯೇ ಇಟಲಿ ಫ್ಯಾಶನ್ ಬ್ರ್ಯಾಂಡ್​ ತಯಾರಿಸಿದ್ದು, ಲೆದರ್​ ಸ್ಯಾಂಡಲ್ಸ್​ ಎಂದು ಪರಿಚಯಿಸಿದೆ. ಆದರೆ, ಇದರಲ್ಲಿ ಎಲ್ಲಿಯೂ ಭಾರತದ ಕುಶಲಕರ್ಮಿಗಳಿಂದ ಪ್ರೇರಣೆಗೊಂಡಿದ್ದು ಅಥವಾ ಅಲ್ಲಿನ ಪಾರಂಪರಿಕ ವಿನ್ಯಾಸದಿಂದ ಸ್ಫೂರ್ತಿ ಪಡೆದಿದ್ದು ಎಂದು ಸಂಸ್ಥೆ ಕೃಪೆ ಹಂಚಿಕೊಂಡಿಲ್ಲ. ಇದು ಹಲವರ ಕೆಂಗಣ್ಣಿಗೆ ಗುರಿಯಾಯಿತು.

ಟೀಕೆ ಬೆನ್ನಲ್ಲೇ ಸಂಸ್ಥೆ ಪ್ರತಿಕ್ರಿಯೆ

ವ್ಯಾಪಕ ಟೀಕೆ, ಛೀಮಾರಿ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಪ್ರಾಡಾ ಬ್ರ್ಯಾಂಡ್​, "ಭಾರತದ ಮಹಾರಾಷ್ಟ್ರ ಮತ್ತು ಕರ್ನಾಟಕದ ನಿರ್ದಿಷ್ಟ ಜಿಲ್ಲೆಗಳಲ್ಲಿ ತಯಾರಿಸಲ್ಪಟ್ಟ ಸಾಂಪ್ರದಾಯಿಕ ಭಾರತೀಯ ಪಾದರಕ್ಷೆಗಳಿಂದ ಪ್ರೇರಿತವಾದ ಲೆದರ್​ ಸ್ಯಾಂಡಲ್‌ಗಳನ್ನು ನಾವು ಮಿಲನ್‌ನಲ್ಲಿ ನಡೆದ 2026ರ ವಸಂತ ಬೇಸಿಗೆ ಫ್ಯಾಶನ್​ ಶೋನಲ್ಲಿ ಪ್ರದರ್ಶಿಸಿದೆವು. ಈ ವಿಷಯದ ಕುರಿತು ಈಗಾಗಲೇ ಮಹಾರಾಷ್ಟ್ರ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿಯೊಂದಿಗೆ ಸಂಪರ್ಕ ಮಾಡಿದ್ದೇವೆ" ಎಂದು ತಿಳಿಸಿದೆ.

ಪ್ರಾಡಾ ವಿರುದ್ಧ ಕಾನೂನು ಕ್ರಮ?

ವರದಿಗಳ ಪ್ರಕಾರ, ಕರ್ನಾಟಕದ ಲಿಡ್​ಕರ್​ (LIDKAR) ಜೊತೆ ಕೊಲ್ಹಾಪುರಿ ಚಪ್ಪಲ್‌ಗಳಿಗೆ ಭೌಗೋಳಿಕ ಸೂಚನೆ (GI) ಪ್ರಮಾಣೀಕರಣವನ್ನು ಹಂಚಿಕೊಂಡಿರುವ ಸಂತ ರೋಹಿದಾಸ್ ಚರ್ಮ ಕೈಗಾರಿಕೆಗಳು ಮತ್ತು ಚರ್ಮಕರ್ ಅಭಿವೃದ್ಧಿ ನಿಗಮ (LIDCOM) ಪ್ರಾಡಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಭಾರತ ಮೂಲದ ಕೊಲ್ಹಾಪುರಿ ಚಪ್ಪಲಿಗಳಿಗೆ ಡಿಸೆಂಬರ್ 11, 2018ರಲ್ಲಿ ಜಿಐ ಟ್ಯಾಗ್ ಸಿಕ್ಕಿತು. ಕೆಲವರಿಗೆ ಜಿಐ ನೋಂದಣಿ ಕೊಡುವುದು ಯಾವ ಕಾರಣಕ್ಕೆ ಎಂಬ ಅರ್ಥವೇ ತಿಳಿದಿಲ್ಲ. ಟ್ಯಾಗ್​ನ ಕೊಡುವ ಉದ್ದೇಶವೇನು ಎಂಬುದರ ಕುರಿತು ಅರಿವಿನ ಕೊರತೆಯಿದೆ" ಎಂದು ಮಹಾರಾಷ್ಟ್ರದ ಕೈಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ,(ಏಜೆನ್ಸೀಸ್).