ಹೈದರಾಬಾದ್: ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೊನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಆದಿಪುರುಷ್ ಶುಕ್ರವಾರ(ಜೂನ್ 16) ರಂದು ವಿಶ್ವದಾದ್ಯಂತ ತೆರೆ ಕಂಡಿದೆ.
ಬಿಡುಗಡೆಗೂ ಮುನ್ನ ತೀವ್ರ ಕುತೂಹಲ ಮೂಡಿಸಿದ್ದ ಆದಿಪುರುಷ್ ಚಿತ್ರವು ಕಳಪೆ VFX ಸೇರಿದಂತೆ ಅನೇಕ ವಿಚಾರಗಳಿಗೆ ಹೆಚ್ಚು ಸದ್ದು ಮಾಡಿತ್ತು. ಈ ಸಿನಿಮಾ ಜಾಗತಿಕವಾಗಿ 7,000ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಬಿಡುಗಡೆ ಜೂನ್ 16ರಂದು ಬಿಡುಗಡೆಯಾಗಿದೆ.
ಇನ್ನು ಚಿತ್ರದ ಕುರಿತು ಪ್ರೇಕ್ಷಕರೊಬ್ಬರು ಕೆಟ್ಟದಾಗಿ ಮಾತನಾಡಿದ್ಧಾರೆ ಎಂದು ಆರೋಪಿಸಿ ಪ್ರಭಾಸ್ ಅಭಿಮಾನಿಗಳು ಆತನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿರುವ ಘಟನೆ ಹೈದರಾಬಾದಿನ ಪ್ರಸಾದ್ ಐಮ್ಯಾಕ್ಸ್ ಥಿಯೇಟರ್ನಲ್ಲಿ ನಡೆದಿದೆ.
ಚಿತ್ರ ವೀಕ್ಷಿಸಿದ ನಂತರ ಪ್ರೇಕ್ಷಕರೊಬ್ಬರು ಮಾಧ್ಯಮಗಳಿಗೆ ಸಿನಿಮಾದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಸಮಯದಲ್ಲಿ ವಿಎಫ್ಎಕ್ಸ್ ಕೆಟ್ಟದಾಗಿದ್ದು ಪ್ಲೇ ಸ್ಟೇಷನ್ನಲ್ಲಿ ಈ ರೀತಿ ಬಳಸುವುದಿಲ್ಲ ಎಂದು ಹೇಳಿದ್ದಾರೆ. ಬಳಿಕ ರಾಮನ ಪಾತ್ರಕ್ಕೆ ಪ್ರಭಾಸ್ ಸರಿಯಾಗಿ ಹೊಂದಿಕೊಂಡಿಲ್ಲ ಎಂದು ಹೇಳುತ್ತಿರುವುದು ಕಂಡು ಬರುತ್ತದೆ.
ಈ ವೇಳೆ ಅಲ್ಲೇ ಇದ್ದ ಪ್ರಭಾಸ್ ಅಭಿಮಾನಿಗಳು ಇದನ್ನು ಕೇಳಿಸಿಕೊಂಡು ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ್ದಕ್ಕೆ ಯುವಕನ ಮೇಲೆ ಗುಂಪುಗೂಡಿ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜ್ಞ