ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ನ ಹಾರ್ಟ್ಲ್ಯಾಂಡ್ ಹಾಸನದಲ್ಲಿ ಕಾಂಗ್ರೆಸ್ ಗುರುವಾರ ಹಮ್ಮಿ ಕೊಂಡಿರುವ ಜನಕಲ್ಯಾಣ ಸಮಾವೇಶದ ಹೊತ್ತಿಗೆ ಸರಿಯಾಗಿ ‘ಪವರ್ ಶೇರಿಂಗ್’ ವಿಚಾರ ಆಡಳಿತ ಪಕ್ಷದ ವಲಯದಲ್ಲಿ ಕಂಪನ ಎಬ್ಬಿಸಿದೆ. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಮನದಾಳದ ಮಾತುಗಳು ಚರ್ಚೆಗೆಡೆ ಮಾಡಿಕೊಟ್ಟಿದೆ. ಹಾಸನ ಸಮಾವೇಶ ವಿವಿಧ ಸಂಘಟನೆಗಳ ಹೆಸರಲ್ಲಿ ರೂಪುಗೊಂಡಿತ್ತು. ಅದರ ಉದ್ದೇಶವೂ ಬೇರೆಯಾಗಿತ್ತು. ಆದರೆ,ಎಐಸಿಸಿ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ಪಕ್ಷದಿಂದಲೇ ಸಮಾವೇಶ ನಡೆಯಬೇಕೆಂಬ ಸೂಚನೆ ನೀಡಿತ್ತು. ಸಮಾವೇಶದ ತಯಾರಿ ಹಿಂದೆ ಸಚಿವರು, ಪಕ್ಷದ ಮುಖಂಡರೇ ಇರುವಾಗ ಬೇರೆ ಹೆಸರಲ್ಲಿ ಮಾಡುವುದು ಸರಿಯಲ್ಲ ಎಂಬ ವಾದವನ್ನು ಸಿಎಂ ಒಪ್ಪಲೇ ಬೇಕಾಯಿತು.
ಇಷ್ಟರ ನಡುವೆ ಸಮಾವೇಶದ ಉದ್ದೇಶಕ್ಕೆ ತಕ್ಕಂತೆ ಇಟ್ಟಿದ್ದ ಹೆಸರನ್ನೂ ಬದಲಿಸುವ ಕೆಲಸ ಕೆಪಿಸಿಸಿ ಕಡೆಯಿಂದ ನಡೆಯಿತು. ಸಮಾರಂಭಕ್ಕೆ ಆಗಮಿಸುವ ಪಕ್ಷದ ಶಾಸಕರು, ಪದಾಧಿಕಾರಿಗಳಿಗೆ ಪಾಸ್ ಕೂಡ ತಾನೇ ವಿತರಿಸಿತು. ಸ್ವತಃ ಕೆಪಿಸಿಸಿ ನಿಯೋಗ ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನ್ನದೇ ಕಾರ್ಯಕ್ರಮ ಎಂದು ರೂಪುರೇಷೆಗೆ ಅಂತಿಮ ಸ್ಪರ್ಶ ನೀಡಿತು. ವೇದಿಕೆ, ಬ್ಯಾನರ್, ಪೋಸ್ಟರ್ಗಳಲ್ಲಿ ಪಕ್ಷದ ಮುಖಂಡರ ಫೋಟೋ ಬರುವಂತೆ ನೋಡಿಕೊಂಡಿತು. ಈ ಬೆಳವಣಿಗೆ ಕಾರಣಕ್ಕೆ ಹಾಸನ ಸಮಾವೇಶ ಮಹತ್ವ ಪಡೆದುಕೊಂಡಿದೆ.
ಇನ್ನು ಸಮಾವೇಶಕ್ಕೆ ಮುನ್ನ ಪವರ್ ಶೇರಿಂಗ್ ವಿಚಾರವಾಗಿ ಡಿಕೆಶಿ ನೀಡಿದ ಹೇಳಿಕೆ ಹಾಗೂ ಆ ಮಾತಿಗೆ ಮುಖ್ಯಮಂತ್ರಿ ಕೊಟ್ಟ ಪ್ರತಿಕ್ರಿಯೆ ಕಾಂಗ್ರೆಸ್ ಪಾಳಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಕೆಲವರಿಗೆ ಈ ಬೆಳವಣಿಗೆ ಬಿರುಗಾಳಿಯ ಮುನ್ಸೂಚನೆಯಾಗಿ ಗೋಚರಿಸಿದೆ.
ಹಾಸನ ಸಮಾವೇಶಕ್ಕೆ ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚಿನ ಜನ ಬರುತ್ತಾರೆ ಎಂದು ಸಿಎಂ ಹೇಳಿದ್ದು, ಅದಕ್ಕೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಹಳ ಸಂತೋಷ, ಅವರು ಬರಲಿ. ಎಲ್ಲಾ ವರ್ಗದ ಜನ ಬೆಂಬಲದಿಂದಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ಈ ಕಾರ್ಯಕ್ರಮಕ್ಕಾಗಿ ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಈ ಸಮಾವೇಶವನ್ನು ಕಾಂಗ್ರೆಸ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದಿದ್ದಾರೆ.
ಡಿಕೆಶಿಗೆ ಪರೋಕ್ಷ ಟಾಂಗ್: ನಮ್ಮ ಮಧ್ಯೆ ಒಪ್ಪಂದ ಆಗಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ಮಧ್ಯೆ ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್ ತೀರ್ವನದಂತೆ ನಡೆದುಕೊಳ್ಳುತ್ತೇವೆ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.
ಡಿ.5ರಂದು ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿ ಒಕ್ಕೂಟದಲ್ಲಿ ಸಮಾವೇಶ ನಡೆಯುತ್ತಿದೆ. ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚಾಗಿ ಜನರು ಕರೆದುಕೊಂಡು ಬರುತ್ತಾರೆ. ಹೆಸರು ಯಾವುದು ಬದಲಾವಣೆ ಆಗಿಲ್ಲ. ಕಾಂಗ್ರೆಸ್ ಪಕ್ಷವೂ ಸೇರಿಕೊಂಡು ಮಾಡುತ್ತಿದೆ ಎಂದರು.
ಸಿಎಂ ಹೇಳಿದ್ದೇ ಅಂತಿಮ: ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಒಪ್ಪಂದವಾಗಿಲ್ಲ ಎಂದು ಸಿಎಂ ಹೇಳಿದ ಮೇಲೆ ಯಾವುದೇ ತಕರಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರ ಹೇಳಿಕೆ ನಂತರ ಈ ವಿಚಾರವಾಗಿ ಯಾವುದೇ ವಾದ, ಚರ್ಚೆ ಇಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದರು.
ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೆಯೋ ಅದರಂತೆ ನಡೆಯುತ್ತೇವೆ. ಸಂಪುಟ ಪುನಾರಚನೆ, ವಿಸ್ತರಣೆ ಸದ್ಯಕ್ಕಿಲ್ಲ. ಸಂಪುಟ ಪುನಾರಚನೆ ಆಗುತ್ತದೆ ಎಂದು ನಾನು ಎಲ್ಲಿ ಹೇಳಿದ್ದೇನೆ?
| ಸಿದ್ದರಾಮಯ್ಯ ಸಿಎಂ
ನನ್ನ ಬಲ, ದೌರ್ಬಲ್ಯ ಎರಡನ್ನೂ ಅರಿತಿರುವೆ. ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ ಅದೇ ನನ್ನ ಬಲ. ನಾನು ಹೈಕಮಾಂಡ್ಗೆ ಬ್ಲಾಕ್ವೆುೕಲ್ ಮಾಡಲ್ಲ, ಅದು ನನ್ನ ವೀಕ್ನೆಸ್. ಗಾಂಧಿ ಕುಟುಂಬಕ್ಕೆ ನನ್ನ ನಿಷ್ಠೆ, ಆ ನಿಷ್ಠೆಗೆ ರಾಯಲ್ಟಿ ಒಂದು ದಿನ ಸಿಕ್ಕೇ ಸಿಗುತ್ತದೆ, ಆ ದಿನಕ್ಕೆ ಕಾಯುತ್ತಿದ್ದೇನೆ. ಒಡಂಬಡಿಕೆ ಆಗಿದೆ. ಅದನ್ನು ಬಹಿರಂಗಪಡಿಸಲ್ಲ.
| ಡಿ.ಕೆ. ಶಿವಕುಮಾರ್ ಡಿಸಿಎಂ
ಸಿಎಂ ಹುದ್ದೆ ಬಗ್ಗೆ ಒಪ್ಪಂದ ಆಗಿದೆ ಎಂದು ಡಿಕೆಶಿ ಹೇಳಿದ್ದಾರೆ. ಇಲ್ಲ ಎಂದು ಸಿಎಂ ಹೇಳಿದ್ದಾರೆ. ಅಲ್ಲಿಗೆ ಅದು ಮುಗಿಯಿತು. ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಗೊತ್ತಿಲ್ಲ. ಒಪ್ಪಂದ ಬಗ್ಗೆ ನನಗೆ ಗೊತ್ತಿಲ್ಲ.
- ಜಿ.ಪರಮೇಶ್ವರ, ಗೃಹ ಸಚಿವ
ಸಿಎಂ ಸ್ಥಾನದ ಬಗ್ಗೆ ದೆಹಲಿಯಲ್ಲಿ ಒಡಂಬಡಿಕೆ ಆಗಿರಬಹುದು. ಅವರವರ ಮಧ್ಯೆ ಮಾತುಕತೆ ಆಗಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರೇ ಹೇಳಬೇಕು.
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ