ಗುಜರಾತ್: ಸಾಮಾನ್ಯವಾಗಿ ಒಂದು ಮನೆ ಅಂದಮೇಲೆ ವಿದ್ಯುತ್ ಬಿಲ್ ಕನಿಷ್ಠ 500ರಿಂದ 2000 ರೂ. ಇರುತ್ತದೆ. ಅದನ್ನು ಮೀರಿದರೆ 3000 ರೂ.ವರೆಗೂ ಬರಬಹುದು, ಅದು ವಿಪರೀತ ಕರೆಂಟ್ ಬಳಕೆ ಮಾಡಿದ್ದಲ್ಲಿ ಮಾತ್ರ! ಆದ್ರೆ, ಇಲ್ಲೊಂದು ಬಡ ಕುಟುಂಬವೊಂದು ಕೇವಲ ಒಂದು ತಿಂಗಳಿಗೆ ಬರೋಬ್ಬರಿ 20 ಲಕ್ಷ ರೂ. ಮೊತ್ತದ ವಿದ್ಯುತ್ ಬಿಲ್ ಪಡೆದಿದ್ದು, ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾದ ಘಟನೆ ಗುಜರಾತ್ನ ನವಜಾರಿಯಲ್ಲಿ ವರದಿಯಾಗಿದೆ.
ಮನೆಯಲ್ಲಿ ಇರುವುದು ನಾಲ್ಕು ಜನ. 4 ಬಲ್ಬ್, 4 ಫ್ಯಾನ್ ಜತೆಗೆ ಒಂದು ಸಣ್ಣ ಫ್ರಿಡ್ಜ್ ಅಷ್ಟೇ. ಅದರಲ್ಲೂ ಬೆಳಗ್ಗೆಯಿಂದ ಸಂಜೆಯವರೆಗೂ ಮನೆಯಲ್ಲಿ ಯಾರು ಇರೋದಿಲ್ಲ. ಎಲ್ಲರೂ ಕೆಲಸಕ್ಕೆಂದು ಹೊರಗೆ ಹೋಗುತ್ತಾರೆ. ಹೀಗಿರುವಾಗ 20 ಲಕ್ಷ ರೂ. ಬಿಲ್ ಬರಲು ಹೇಗೆ ಸಾಧ್ಯ? ನಮಗೆ ಉತ್ತರ ಬೇಕು ಎಂದು ಬಡ ಕುಟುಂಬದ ಸದಸ್ಯರು ಗುಜರಾತ್ ವಿದ್ಯುತ್ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಕುಟುಂಬದ ಸದಸ್ಯೆ ಪಂಕ್ತಿಬೆನ್ ಪಟೇಲ್ ಘಟನೆ ವಿವರಿಸಿ, "ನಾನು ಬೆಳ್ಳಗ್ಗೆ ಪೆಟ್ರೋಲ್ ಬಂಕ್ಗೆ ಕೆಲಸಕ್ಕೆಂದು ಹೋದರೆ, ಮನೆಗೆ ಹಿಂತಿರುಗುವುದೇ ಸಂಜೆಯ ನಂತರ. ಇನ್ನು ಉಳಿದವರು ಕೂಡ ಬರುವುದು ಸಂಜೆ ಮೇಲೆಯೇ. ಹೀಗಿದ್ದಮೇಲೆ 20,01,902 ರೂ. ಕರೆಂಟ್ ಬಿಲ್ ಹೇಗೆ ಬರಲು ಸಾಧ್ಯ? ಅದು ಒಂದು ತಿಂಗಳ ಅವಧಿಗೆ? ಮನೆಯಲ್ಲಿ ಇರುವುದೇ 4 ಜನ, 4 ಫ್ಯಾನ್ ಮತ್ತು ನಾಲ್ಕು ಬಲ್ಬ್. ಇದ್ಯಾವುದನ್ನು ನಂಬಲಾಗ್ತಿಲ್ಲ. ಈ ಬಿಲ್ ಬಗ್ಗೆ ಜಿಇಬಿ ನಮಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
"ನಾವು ಪ್ರತಿ ತಿಂಗಳ ವಿದ್ಯುತ್ ಬಿಲ್ ಅನ್ನು ಸರಿಯಾದ ಸಮಯಕ್ಕೆ ಪಾವತಿಸುತ್ತೇವೆ. ಆದ್ರೆ, ಈ ಬಿಲ್ ನಮ್ಮ ನೆಮ್ಮದಿಯನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದೇವೆ" ಎಂದಿದ್ದರು. ಈ ಕುರಿತು ಮಾಹಿತಿ ಪಡೆದ ಗುಜರಾತ್ ವಿದ್ಯುತ್ ಮಂಡಳಿಯ ಅಧಿಕಾರಿ, ಇದು ಮೀಟರ್ ಪರಿಶೀಲನೆ ವೇಳೆ ನಡೆದ ಎಡವಟ್ಟಾಗಿದೆ ಎಂದು ಹೇಳಿ, ಒಂದೆರೆಡು ಗಂಟೆಗಳೊಳಗೆ ಗೊಂದಲವನ್ನು ಬಗೆಹರಿಸಿದ್ದಾರೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ 20 ಲಕ್ಷ ರೂ. ವಿದ್ಯುತ್ ಬಿಲ್ನ ಫೋಟೋ ಸದ್ಯ ನೆಟ್ಟಿಗರಲ್ಲಿ ಭಾರೀ ಅಚ್ಚರಿ ಮೂಡಿಸಿದೆ,(ಏಜೆನ್ಸೀಸ್).