ನ್ಯೂಸ್

ಬೆಂಗಳೂರು ರೇವ್​ ಪಾರ್ಟಿ ಕೇಸ್​; ನಟಿ ಹೇಮಾ ಪರ ಸಿಸಿಬಿಗೆ ರಾಜಕಾರಣಿಗಳಿಂದ ನಿರಂತರ ಒತ್ತಡ!

ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ರೇವ್​ ಪಾರ್ಟಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ತೆಲುಗು ನಟಿ ಹೇಮಾಗೆ ನೋಟಿಸ್​ ನೀಡಿದ ಬೆನ್ನಲ್ಲೇ ಆಂಧ್ರಪ್ರದೇಶದ ರಾಜಕಾರಣಿಗಳು ಸಿಸಿಬಿ ಮೇಲೆ ಒತ್ತ ಹೇರಲು ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರೇವ್‌ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ ಹೆಚ್ಚಿನ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಹೀಗಾಗಿ ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ಒತ್ತಡ ಹೆಚ್ಚಾಗಿದೆ. ಹೇಮಾಗೆ ನೋಟೀಸ್ ಜಾರಿ ಮಾಡಿದ ಬಳಿಕ ಸಿಸಿಬಿ ಪೊಲೀಸರಿಗೆ ಆಂಧ್ರಪ್ರದೇಶ ರಾಜಕಾರಣಿಗಳು ಮೇಲಿಂದ ಮೇಲೆ ಕರೆ ಮಾಡುತ್ತಿದ್ದಾರೆ. ಜೊತೆಗೆ ಹೇಮಾ ಬಂಧನ ಮಾಡದಂತೆ ಒತ್ತಡ ಹೇರುತ್ತಿದ್ದಾರೆ.

ಇದಲ್ಲದೆ ರೇವ್​ ಪಾರ್ಟಿಗೆ ಸಂಬಂಧಿಸಿದಂತೆ ಸಿಸಿಬಿ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಸತ್ಯ ಬಯಲಾಗುತ್ತಿದೆ. ಇದು ಕೇವಲ ಡ್ರಗ್ಸ್ ಪಾರ್ಟಿ ಮಾತ್ರವಲ್ಲ‌ ಎಂದು ತಿಳಿದು ಬಂದಿದೆ. ರೇವ್​ ಪಾರ್ಟಿಯಲ್ಲಿ ಡ್ರಗ್ಸ್​, ಸೆಕ್ಸ್​ ಹಾಗೂ ಬೆಟ್ಟಿಂಗ್​ ದಂಧೆ ನಡೆಸಲಾಗುತ್ತಿತ್ತು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರ ಖಾತೆಯಲ್ಲಿನ 86 ಲಕ್ಷ ಹಣ ಫ್ರೀಜ್ ಮಾಡಲಾಗಿದೆ. ಒಟ್ಟು ಏಳು ಬ್ಯಾಂಕ್ ಖಾತೆಗಳಲ್ಲಿನ 86 ಲಕ್ಷ ಹಣ‌ವನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಅಲ್ಲದೆ ಬೆಟ್ಟಿಂಗ್ ಮತ್ತು ಸೆಕ್ಸ್ ದಂಧೆ ನಡೆದಿರುವುದು ತನಿಖೆಯಲ್ಲಿ ದೃಢವಾಗಿದೆ.

ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್, ಗಾಂಜಾ, ಹೈಡ್ರೋ ಗಾಂಜಾ, ಎಂ, ಎಕ್ಸ್ಟೆಸಿ ಪಿಲ್ಸ್, ಚಸರ್ ಹೀಗೆ ಹಲವಾರು ಮಾದರಿಯ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಮೇ 19 ರಂದು ಬೆಳ್ಳಂಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ದಾಳಿ ನಡೆಸಿದ ಪೊಲೀಸರು 1.5 ಕೋಟಿ ಮೌಲ್ಯದ MDMA (Ecstacy) ಮಾತ್ರೆಗಳು, ಹೈಡ್ರೋ ಗಾಂಜಾ, ಕೊಕೇನ್, ಹೈ ಎಂಡ್ ಕಾರುಗಳು, DJ ಉಪಕರಣಗಳು, ಧ್ವನಿ ಮತ್ತು ಬೆಳಕು ಉಪಕರಣಗಳು ಸೇರಿದಂತೆ 1.5 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.