ಆಗ್ರಾ: ಅತ್ಯಧಿಕ ಸಂಚಾರ ದಟ್ಟಣೆ ಇರುವ ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಪ್ರಯಾಣಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿರುವ ಪ್ರಕರಣ ಹೆಚ್ಚು ವರದಿಯಾದ ಬೆನ್ನಲ್ಲೇ ಮಥುರಾ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ದರೋಡೆಕೋರರ ಪತ್ತೆಗೆ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು, ಹೆದ್ದಾರಿಯುದ್ದಕ್ಕೂ ಕಣ್ಣಿಟ್ಟಿದ್ದಾರೆ. ಎಕ್ಸ್ಪ್ರೆಸ್ವೇಯಲ್ಲಿ ದಾರಿ ಮಧ್ಯೆ ಎಲ್ಲೂ ವಾಹನ ನಿಲ್ಲಿಸದಂತೆ ಟೋಲ್ ಪ್ಲಾಜಾದಲ್ಲಿ ಪ್ರತಿ ಪ್ರಯಾಣಿಕರಿಗೆ ಸೂಚನೆ ನೀಡಲಾಗುತ್ತಿದೆ.
ಹೆದ್ದಾರಿಯಲ್ಲಿ ಕಳ್ಳರ ಪತ್ತೆಗೆ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇಯ ದಾರಿಯುದ್ದಕ್ಕೂ ಎರಡು ಕಿ.ಮೀ.ಗಳ ಅಂತರದಲ್ಲಿ ಒಬ್ಬೊಬ್ಬ ಪೊಲೀಸ್ ಮರವೇರಿ, ದರೋಡೆಕೋರರತ್ತ ದೃಷ್ಟಿ ಹಾಯಿಸಿದ್ದಾರೆ. ಇದಕ್ಕಾಗಿ ನೂರುಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಖಾಕಿ ಕಳಚಿಟ್ಟು, ಜನಸಾಮಾನ್ಯರಂತೆ ಬಟ್ಟೆ ಧರಿಸಿರುವ ಪೊಲೀಸರು, ಪಿಸ್ತೂಲ್ ಮತ್ತು ಬೈನಾಕ್ಯುಲರ್‌ಗಳೊಂದಿಗೆ ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಳೆದ ಮೇ 29 ರಂದು, ದೆಹಲಿ ಮೂಲದ ಇಂಜಿನಿಯರ್ ಹಾಗೂ ಅವರ ಪತ್ನಿ, ಚಾಲಕನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು, ನಗದು ಹಾಗೂ ಚಿನ್ನಾಭರಣ ದೋಚಿದ್ದರು. ಇದಾಗಿ ಕೆಲವೇ ದಿನಗಳ ಅಂತರದಲ್ಲಿ ಕಿರಾಣಿ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ಹಣ ಕಿತ್ತುಕೊಂಡಿದ್ದರು. ಎಕ್ಸ್ಪ್ರೆಸ್ವೇಯಲ್ಲಿ ಕಳ್ಳರ ಉಪಟಳ ಹೆಚ್ಚುತ್ತಿರುವುದನ್ನು ಅರಿತ ಆಗ್ರಾ ಪೊಲೀಸರು ರಾತ್ರಿ ಹೊತ್ತು ಕಾರ್ಯಾಚರಣೆಗೆ ಇಳಿದಿದ್ದಾರೆ.
ಎಕ್ಸ್ಪ್ರೆಸ್ವೇಯಲ್ಲಿ ದರೋಡೆ ಪ್ರಕರಣಗಳು ನಡೆದಿರುವ ಬಗ್ಗೆ ಸತತ ದೂರು ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ದೂರುದಾರರು ನೀಡಿರುವ ಮಾಹಿತಿ ಪ್ರಕಾರ ಅಪರಾಧಿಗಳು 20-35 ವರ್ಷ ವಯಸ್ಸಿನವರಾಗಿದ್ದಾರೆ. ಇದೀಗ ಅವರ ರೇಖಾಚಿತ್ರ ಬಿಡುಗಡೆಗೊಳಿಸಲಾಗಿದೆ. ಜತೆಗೆ ಕೆಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಹೆದ್ದಾರಿಯಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ ಎಂದು ಎಸ್ಪಿ ಶೈಲೇಂದ್ರ ಪಾಂಡೆ ತಿಳಿಸಿದ್ದಾರೆ. (ಏಜೆನ್ಸೀಸ್)