ಚಿಕ್ಕಮಗಳೂರು: ನಗರದ ಬಸವನಹಳ್ಳಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾದ ಸೂಟ್‌ಕೇಸ್ ಬಾಂಬ್ ಠುಸ್ ಆಗಿದ್ದರೂ, ಈಗ ಅದನ್ನು ಇಟ್ಟು ಹೋದ ಕೆಂಪು ಚೂಡಿದಾರ್ ತೊಟ್ಟಿದ್ದ ಮಹಿಳೆಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.
ಬುಧವಾರ ತಡರಾತ್ರಿಯವರೆಗೆ ನಡೆಸಿದ ಕಾರ್ಯಾಚರಣೆ ಬಳಿಕ ಅದು ಖಾಲಿ ಸೂಟ್‌ಕೇಸ್ ಎಂಬುದು ಪಕ್ಕಾ ಆಗಿ ಜನ ನಿಟ್ಟುಸಿರು ಬಿಟ್ಟಿರುವುದೇನೋ ನಿಜ. ಆದರೆ ಅದನ್ನು ಇಟ್ಟುಹೋದ ಕೃತ್ಯದ ಮರ್ಮವೇನೆಂದು ಅರಿಯುವ ಸವಾಲು ಪೊಲೀಸರ ಬೆನ್ನಿಗೇರಿದ್ದು, ಮಹಿಳೆಯ ಜಾಡು ಹಿಡಿಯಲು ಮುಂದಾಗಿದ್ದಾರೆ.
ಬುಧವಾರ ಸಂಜೆ ಸೂಟ್‌ಕೇಸ್ ಪತ್ತೆಯಾಗುತ್ತಿದ್ದಂತೆ ಸಿಸಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ವೀಕ್ಷಿಸಿದ್ದಾರೆ. ಕೆಂಪು ಬಣ್ಣದ ಚೂಡಿದಾರ್ ಧರಿಸಿದ್ದ ಮಹಿಳೆ ಮರದ ಬುಡದಲ್ಲಿ ಸೂಟ್‌ಕೇಸ್ ಇಟ್ಟು ತಕ್ಷಣ ಫೋನ್‌ನಲ್ಲಿ ಸಂಭಾಷಣೆ ನಡೆಸಿ ಅಲ್ಲಿಂದ ತೆರಳಿದ್ದು ಒಂದು ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಸ್ವಲ್ಪ ದೂರದ ಇನ್ನೊಂದು ಸಿಸಿ ಟಿವಿ ಫುಟೇಜ್‌ನಲ್ಲಿ ಅದೇ ಮಹಿಳೆ ಚೂಡಿದಾರದ ಮೇಲು ಹೊದಿಕೆಯಿಂದ ಮುಖ ಮುಚ್ಚಿಕೊಂಡು ಸಾಗಿದ್ದಾಳೆ. ಈಗ ಕೇವಲ ಆಕೆಯ ನಡಿಗೆ ಆಧರಿಸಿ ಯಾರೆಂಬುದನ್ನು ಪತ್ತೆ ಹಚ್ಚುವ ಸವಾಲು ಪೊಲೀಸರಿಗೆ ಎದುರಾಗಿದೆ.
ಖಾಸಗಿ ಲಾಡ್ಜ್ ಮುಂಭಾಗದ ಮರದ ಬುಡದಲ್ಲಿ ಬುಧವಾರ ಸಂಜೆ ಸೂಟ್‌ಕೇಸ್ ಪತ್ತೆಯಾಗಿ ಜನರಲ್ಲಿ ಆತಂಕ ಹುಟ್ಟಿಸಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಟ್‌ಕೇಸನ್ನು ಗಾಂಧಿ ಪಾರ್ಕ್ ಸಮೀಪದ ಡಿಎಆರ್ ಮೈದಾನಕ್ಕೆ ಒಯ್ದಿದ್ದರು.
ರಾತ್ರಿ 11.45ರ ಸುಮಾರಿಗೆ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಟ್‌ಕೇಸ್ ಇಟ್ಟಿರುವ ಸ್ಥಳಕ್ಕೆ ತೆರಳಿ ಲೋಹಶೋಧಕ ಯಂತ್ರದಿಂದ ಪರಿಶೀಲಿಸಿದರು. ಸೂಟ್‌ಕೇಸ್‌ನಲ್ಲಿ ಲೋಹದ ವಸ್ತುಗಳಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗದೆ ಬಾಂಬ್ ನಿಷ್ಕ್ರಿಯ ತಂಡದ ಸಿಬ್ಬಂದಿ ಬಾಂಬ್ ನಿರೋಧಕ ಉಡುಪು ಧರಿಸಿ ಸೂಟ್‌ಕೇಸ್ ತೆರೆಯಲು ಮುಂದಾದರು. ಸಾಧ್ಯವಾಗಲಿಲ್ಲ.
ನಂತರ ಕೊರ್ಡೆಕ್ಸ್ ಮಾದರಿಯ ಕಾರ್ಯಾಚರಣೆ ನಡೆಸಿ ಸಣ್ಣ ಪ್ರಮಾಣದ ಸಿಡಿಮದ್ದು ಮೂಲಕ ಸೂಟ್‌ಕೇಸ್ ಸಿಡಿಸಿದ ಬಳಿಕ ಅದು ಖಾಲಿ ಇರುವುದು ಖಚಿತವಾಯಿತು. ರಾತ್ರಿ 12ರಿಂದ 2 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಯಿತು. ಸಿಡಿಸಿದ ಶಬ್ದ ಕೇಳಿಬಂದರೂ ಸುತ್ತಮುತ್ತಲಿನ ಜನರಿಗೆ ಆತಂಕವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು.