ರಿಯಾಸಿ: ಜೂನ್.09ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಕಾರಣ, ಘಟನೆಯಲ್ಲಿ 41ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, 9 ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದರು. ಈ ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರ ಪೈಕಿ ಒಬ್ಬನ ರೇಖಾಚಿತ್ರವನ್ನು ಇದೀಗ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಪಿಟಿಐ ವರದಿ ಪ್ರಕಾರ, ಮೂವರು ಉಗ್ರರ ಪೈಕಿ ಒಬ್ಬನ ರೇಖಾಚಿತ್ರವನ್ನು ಪ್ರಕಟಿಸಿರುವ ಜಮ್ಮು ಪೊಲೀಸರು, ಶಂಕಿತನ ಬಗ್ಗೆ ಅಗತ್ಯ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಯನ್ನು ಆಧರಿಸಿ ಭಯೋತ್ಪಾದಕನ ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದೆ.
53 ಸೀಟ್ವುಳ್ಳ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇತರೆ ರಾಜ್ಯಗಳ ಯಾತ್ರಾರ್ಥಿಗಳು, ಉತ್ತರಪ್ರದೇಶದಿಂದ ಮಾತಾ ವೈಷ್ಣೋ ದೇವಿ ದೇವರ ದರ್ಶನಕ್ಕೆ ತೆರಳುತ್ತಿದ್ದರು. ಈ ವೇಳೆ ಯಾತ್ರಾರ್ಥಿಗಳಿದ್ದ ಬಸ್ನ ಗುರಿಯಾಗಿಸಿಕೊಂಡ ಉಗ್ರರ ಗುಂಪು, ಸಾರಿಗೆ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದರು. ನಿಯಂತ್ರಣ ಕಳೆದುಕೊಂಡ ಬಸ್ ಕಮರಿಗೆ ಉರುಳಿಬಿದ್ದಿತು. ದುರ್ಘಟನೆಯಲ್ಲಿ 9 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದು, 41ಕ್ಕೂ ಅಧಿಕ ಮಂದಿ ಗಂಭೀರಗೊಂಡ ಬೆನ್ನಲ್ಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು,(ಏಜೆನ್ಸೀಸ್).