| ಕೀರ್ತಿನಾರಾಯಣ ಸಿ. ಬೆಂಗಳೂರು
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ರಹಸ್ಯವನ್ನು ದೆಹಲಿ ಎನ್ಸಿಬಿ ತಂಡ ಭೇದಿಸಿದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸರು, ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಸಾಲು ಸಾಲು ದಾಳಿ ನಡೆಸಿ ಡ್ರಗ್ಸ್ ಜಾಲಗಳನ್ನು ಬಯಲಿಗೆಳೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮಾದಕ ಜಾಲದ ಬೇರು ಇಷ್ಟೊಂದು ಬ್ರಹ್ಮಾಂಡವಾಗಿ ವ್ಯಾಪಿಸಿರುವುದು ಪೊಲೀಸರಿಗೆ ಈವರೆಗೂ ತಿಳಿದಿರಲಿಲ್ಲವೇಕೆ ಎಂಬ ಗಂಭೀರ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ನಶೆಯೇರಿಸಿಕೊಳ್ಳುವ ದಂಧೆಗೆ ಪೊಲೀಸರ ರಕ್ಷಣೆ ಇತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ, ಪೊಲೀಸರು ಶಾಮೀಲಾಗದೆ ಇಂಥ ಯಾವ ಅಪರಾಧವೂ ನಡೆಯುವುದಿಲ್ಲ. ಡ್ರಗ್ಸ್ ಪೂರೈಕೆ, ತಡರಾತ್ರಿ ಪಾರ್ಟಿಗಳು, ಸೆಲೆಬ್ರಿಟಿಗಳು, ಶ್ರೀಮಂತರ ಮಕ್ಕಳ ಅಮ ಲೇರಿಸಿಕೊಳ್ಳುವ ಚಟದ ಬಗ್ಗೆ ಎಲ್ಲ ಮಾಹಿತಿ ಸ್ಥಳೀಯ ಠಾಣಾಧಿಕಾರಿಗಳಿಗೆ ಇರುತ್ತದೆ. ಆದರೆ, ಯಾವುದೋ ಆಮಿಷಕ್ಕೆ ಒಳಗಾಗಿ, ಪ್ರಭಾವಕ್ಕೆ ಹೆದರಿ ಅಥವಾ ಒತ್ತಡಕ್ಕೆ ಸಿಲುಕಿ ಜಾಣಕುರುಡು ಪ್ರದರ್ಶಿಸುತ್ತಿರುತ್ತಾರೆ. ಆದರೆ, ಇಷ್ಟು ಕಾಲ ಸುಮ್ಮನಿದ್ದವರು ಈಗ ಪೈಪೋಟಿಗೆ ಬಿದ್ದವರಂತೆ ಬೆಂಗಳೂರು, ಕಲಬುರ್ಗಿ, ವಿರಾಜಪೇಟೆ, ನೆಲಮಂಗಲ, ಕೋಲಾರ, ವಿಜಯಪುರ ಹೀಗೆ ಎಲ್ಲ ಕಡೆ ‘ಮೊದಲೇ ತಿಳಿದಿದ್ದ’ ಜಾಲಗಳನ್ನು ಪತ್ತೆಹಚ್ಚುತ್ತಿದ್ದಾರೆ. ಇನ್ನು ಪೊಲೀಸ್ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ 2018ರಲ್ಲಿ 1032, 2019ರಲ್ಲಿ 1661 ಮತ್ತು 2020ರಲ್ಲಿ 1255 ಡ್ರಗ್ಸ್ ಕೇಸ್ಗಳು ಪತ್ತೆಯಾಗಿವೆ. ವಾರ್ಷಿಕ ಸರಾಸರಿ 1100 ಪ್ರಕರಣ ಎನ್ಡಿಪಿಎಸ್ ಕಾಯ್ದೆಯಡಿ ದಾಖಲಾಗುತ್ತಿವೆ. ಸಣ್ಣಪುಟ್ಟ ಕೇಸ್ಗಳನ್ನು ಪತ್ತೆಹಚ್ಚುವ ಪೊಲೀಸರು ದೊಡ್ಡಮಟ್ಟದ ದಂಧೆಗಳಿಗೆ ಸಾಥ್ ಕೊಡುತ್ತಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ:
ಮೊದಲ ದಿನವೇ ಮಾಹಿತಿ: ಠಾಣಾಧಿಕಾರಿಯಾಗಿ ಚಾರ್ಜ್ ತೆಗೆದುಕೊಂಡ ದಿನವೇ ಸರಹದ್ದಿನ ಎಲ್ಲ ಮಾಹಿತಿ, ಫೈಲ್ಗಳು ವರ್ಗಾವಣೆಯಾಗುತ್ತವೆ. ಸೂಕ್ಷ್ಮ ಪ್ರದೇಶಗಳು ಯಾವವು, ಕಾನೂನುಬಾಹಿರ ಚಟುವಟಿಕೆ ಎಲ್ಲೆಲ್ಲಿ ನಡೆಯುತ್ತೆ, ಡ್ರಗ್ ಸ್ಪಾಟ್ ಯಾವುದು, ವೇಶ್ಯಾವಾಟಿಕೆ ಎಲ್ಲಿ ನಡೆಯುತ್ತೆ, ಯಾವ ಕಾಲೇಜು, ಅಂಗಡಿ, ಮನೆಯಲ್ಲಿ ದಂಧೆ ನಡೆಯುತ್ತೆ, ತಡರಾತ್ರಿ ಪಾರ್ಟಿಗಳು ಎಲ್ಲಿ ನಡೆಯುತ್ತವೆ, ಗಿರಾಕಿಗಳು ಯಾರು ಎಂಬೆಲ್ಲ ಮಾಹಿತಿ ದೊರೆಯುವುದು ಸಾಮಾನ್ಯ.
ವಿದೇಶಿಗರ ಗಡಿಪಾರಿಗೆ ಮೀನಮೇಷ: ಬಹುತೇಕ ಕೇಸ್ಗಳಲ್ಲಿ ಆಫ್ರಿಕಾ ಪ್ರಜೆಗಳೇ ಸಿಕ್ಕಿಬಿದ್ದಿದ್ದು, ಅವರಿಂದಲೇ ಡ್ರಗ್ಸ್ ಜಾಲ ಜೀವಂತವಾಗಿದೆ. ವೀಸಾ ಅವಧಿ ಮುಗಿದ ನಂತರವೂ ನೆಲೆಸಿರುವ ವಿದೇಶಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಸರ್ಕಾರ ಆದ್ಯತೆ ಕೊಡದಿರುವುದು ಡ್ರಗ್ಸ್ ದಂಧೆ ಹೆಚ್ಚಾಗಲು ಕಾರಣ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
ಡ್ರಗ್ಸ್ ದಂಧೆ ಹಠಾತ್ತನೆ ಹುಟ್ಟಿಕೊಂಡಿಲ್ಲ. ಹಲವು ವರ್ಷಗಳಿಂದ ನಡೆಯುತ್ತಿದೆ. ವಾರ್ಷಿಕ ಕೋಟ್ಯಂತರ ರೂ. ವ್ಯವಹಾರವಿದೆ. ಬೆಂಗಳೂರು ಡ್ರಗ್ಸ್ ರಾಜಧಾನಿಯಾಗುತ್ತಿದೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ 2018ರಲ್ಲೇ ಕೇಂದ್ರ ಗೃಹ ಸಚಿವಾಲಯ, ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದು ಎಚ್ಚರಿಕೆ ಕೊಟ್ಟಿತ್ತು. 2018ರ ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಡ್ರಗ್ಸ್ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಇದನ್ನೂ ಓದಿ: 14 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕ ಪಟ್ಟಿಯಲ್ಲಿದೆಯೇ?
ಬಿಜೆಪಿ ಶಾಸಕ ಕಳಕಪ್ಪ ಬಂಡಿ, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ತಮ್ಮ ಮಗ ಡ್ರಗ್ಸ್ ವ್ಯಸನಿಯಾಗಿದ್ದು, ಬಿಡಿಸಲು ಸಾಕಷ್ಟು ಕಷ್ಟವಾಯಿತು ಎಂದು ಖುದ್ದು ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದರು. ಡ್ರಗ್ಸ್ ಜಾಲ ಮಟ್ಟಹಾಕುವುದರ ಜತೆಗೆ ಸಿಕ್ಕಿಬಿದ್ದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸುವುದಾಗಿ ಆಗಿನ ಸಮ್ಮಿಶ್ರ ಸರ್ಕಾರ ಭರವಸೆ ಕೊಟ್ಟಿತ್ತಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು.
ಇಲ್ಲಿವರೆಗೆ ಪೊಲೀಸರು ದುಡ್ಡು ಪಡೆದು ಡ್ರಗ್ಸ್ ದಂಧೆಗೆ ನಡೆಯಲು ಬಿಟ್ಟಿದ್ದರು. ಈಗ ಕೇಂದ್ರ ತನಿಖಾ ತಂಡ ಪ್ರಕರಣ ಭೇದಿಸಿದ ನಂತರ ಪೈಪೋಟಿಗೆ ಬಿದ್ದವರಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೊದಲೇ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಭಯೋತ್ಪಾದಕರಿಗಿಂಥ ಡ್ರಗ್ಸ್ ಡೇಂಜರ್. ಮಟ್ಟಹಾಕದಿದ್ದರೆ ಲಕ್ಷಾಂತರ ಮಕ್ಕಳ ಭವಿಷ್ಯ ಹಾಳಾಗುತ್ತೆ. | ಬಿ.ಬಿ.ಅಶೋಕ್ ಕುಮಾರ್, ನಿವೃತ್ತ ಎಸಿಪಿ
ಮಾದಕ ದ್ರವ್ಯ ದಂಧೆ ಕುರಿತು ಮಾಧ್ಯಮಕ್ಕೆ ನಿರಂತವಾಗಿ ಹೇಳಿಕೆ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ನೋಟಿಸ್ ಕೊಟ್ಟು, ಶನಿವಾರ ಸಿಸಿಬಿ ಕಚೇರಿಗೆ ಬಂದು ಸಾಕ್ಷ್ಯ ಒದಗಿಸುವಂತೆ ಸೂಚನೆ ನೀಡಿದೆ. ಮತ್ತೊಂದೆಡೆ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಡ್ರಗ್ಸ್ ದಂಧೆಯಲ್ಲಿ ಕೈವಾಡ ಇರುವ ಬಗ್ಗೆ ಆರೋಪ ಮಾಡಿದ್ದ ಸಂಬರಗಿ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ.
ಕಳೆದೊಂದು ವಾರದಲ್ಲಿ ಬೆಂಗಳೂರು, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಕೋಲಾರ, ಹಾಸನ, ಕೊಡಗು, ನಾಗಮಂಗಲ, ಶ್ರೀರಂಗಪಟ್ಟಣ, ಮಳವಳ್ಳಿ, ಬೆಳಗಾವಿ, ಕಲಬುರ್ಗಿ, ಧಾರವಾಡ, ಮಂಗಳೂರಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ 65ಕ್ಕೂ ಹೆಚ್ಚು ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಕೋಟ್ಯಂತರ ರೂ. ಮೌಲ್ಯದ ಕೊಕೇನ್, ಎಂಡಿಎಂಎ, ಗಾಂಜಾ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಗಾಂಜಾ ವ್ಯಸನಿಗಳ ಚಳಿ ಬಿಡಿಸಿದ ಪೊಲೀಸರು, ಉಡುಪಿಯಲ್ಲಿ 10 ಮಂದಿ ವಶಕ್ಕೆ
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಮತ್ತಿಬ್ಬರು ಪೆಡ್ಲರ್ಗಳಾದ ನ್ಯೂ ತಿಪ್ಪಸಂದ್ರದ ಪ್ರತೀಕ್ ಶೆಟ್ಟಿ ಮತ್ತು ಹರಿಯಾಣ ಮೂಲದ ಆದಿತ್ಯಾ ಅಗರ್ವಾಲ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 10ಕ್ಕೆ ಏರಿದೆ. ಮತ್ತೊಂದೆಡೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ, ನಯಾಜ್, ಲೂಪ್ ಪೆಪ್ಪರ್, ರಾಹುಲ್ ತೋನ್ಸೆ, ವಿರೇನ್ ಖನ್ನಾನನ್ನು ಕೋರ್ಟ್ಗೆ ಹಾಜರುಪಡಿಸಿದ ಸಿಸಿಬಿ ಸೆ. 14ವರೆಗೆ ಮತ್ತೆ ಕೋರ್ಟ್ ಅನುಮತಿ ಪಡೆದು ಕಸ್ಟಡಿಗೆ ಪಡೆದುಕೊಂಡಿದೆ.
ದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ದಂಧೆ ಜಾಲ ಬಯಲಿಗೆ ತರಲಾಗುತ್ತಿದೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಇದರಲ್ಲಿ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ. ತನಿಖೆ ವೇಗವಾಗಿ ಸಾಗಿದ್ದು, ಯಾರೇ ಇರಲಿ, ಎಷ್ಟೇ ಪ್ರಭಾವಿ ಗಳಾಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ