ನ್ಯೂಸ್

ಸರ್ಕಾರಿ ಬಸ್‌ ಮೇಲೆ ನಿಂತು ಪುಂಡಾಟ ಮೆರೆದ ನಾಲ್ವರು ಕಾಲೇಜು ವಿದ್ಯಾರ್ಥಿಗಳು; ಪೊಲೀಸರು ವಿಧಿಸಿದ ಶಿಕ್ಷೆಯೇನು ಗೊತ್ತಾ?

ಚೆನ್ನೈ: ನಗರದ ತ್ಯಾಗರಾಯ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ನಾಲ್ವರು ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಬಸ್‌ ಮೇಲೆ ನಿಂತು ಅಜಾಗರೂಕತೆಯಿಂದ ವರ್ತಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ವಿದ್ಯಾರ್ಥಿಗಳು ಎನ್ನೂರು ಮತ್ತು ವಲ್ಲಲಾರ್ ನಗರ ನಡುವೆ ಸಂಚರಿಸುವ ಸರ್ಕಾರಿ ಬಸ್ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುವ ಮುಖೇನ ಪುಂಡಾಟ ಮೆರೆದಿದ್ದಾರೆ. ಈ ರೀತಿಯ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ವೀಡಿಯೋ ಶೀಘ್ರವೇ ಪೊಲೀಸ್​​ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ನಾಲ್ವರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಪುಂಡಾಟವನ್ನು ಪ್ರಶ್ನಿಸಿದ ನಗರ ಪೊಲೀಸರು, ವಿದ್ಯಾರ್ಥಿಗಳಿಗೆ ಬುದ್ಧಿ ಮಾತನ್ನು ಹೇಳಿ, ಭವಿಷ್ಯದಲ್ಲಿ ಇಂತಹ ಅಪಾಯಕಾರಿ ವರ್ತನೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಲಿಖಿತ ರೂಪದಲ್ಲಿ ಕೊಡಿ ಎಂದು ಹೇಳಿದ್ದಾರೆ.

ಇಲ್ಲಿಗೆ ಬಿಟ್ಟು ಕಳುಹಿಸದ ಪೊಲೀಸ್ ಅಧಿಕಾರಿಗಳು, ನಾಲ್ವರನ್ನು ಘಟನೆಯ ಸ್ಥಳಕ್ಕೆ ಕರೆದುಕೊಂಡು ಹೋಗಿ, ಟ್ರಾಫಿಕ್​ ನಿಯಂತ್ರಣ ಮಾಡುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ, ನಂತರ ಅದೇ ರೀತಿ ಮಾಡುವಂತೆ ತಿಳಿಸಿದ್ದಾರೆ. ಈ ರೀತಿ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸಿದ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).